ಮದ್ದೂರು ತಾಲೂಕಿನ ಕೆ.ಹಾಗಲಹಳ್ಳಿ ಗ್ರಾಮದ ಶ್ರೀ ಮಾರಮ್ಮದೇವಿ ದೇವಾಲಯದ ಬಿಂಬ ಪ್ರತಿಷ್ಠಾಪನೆ ಹಾಗೂ ನಮ್ಮ ಕಳಶ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೆ.ಎಂ.ಉದಯ್, ಹರೀಶ್‌ಬಾಬು, ಶಿವಲಿಂಗೇಗೌಡ, ರವೀಶ್ ಇದ್ದರು.
ಮದ್ದೂರು: ದೈನಂದಿನ ಜಂಜಾಟದ ನಡುವೆ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನ, ಮಾನಸಿಕ ನೆಮ್ಮದಿ ಸಿಗಲಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಕೆ.ಹಾಗಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಮಾರಮ್ಮದೇವಿ ದೇವಾಲಯದ ಬಿಂಬ ಪ್ರತಿಷ್ಠಾಪನೆ ಹಾಗೂ ಕಳಶ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಶಾಲೆ-ಕಾಲೇಜು, ದೇವಾಲಯಗಳು ಮನುಷ್ಯನ ನೆಮ್ಮದಿ ನೀಡುವ ತಾಣಗಳಾಗಿದ್ದು, ಇವುಗಳ ಪುನಶ್ಚೇತನ ಅಗತ್ಯ ಎಂದರು.
ಗ್ರಾಮೀಣ ಭಾಗದ ಜನರು ಜಾನಪದ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಕಲೆಯ ಉನ್ನತಿಗೆ ಹಿಂದಿನಿಂದಲೂ ಶ್ರಮಿಸುತ್ತಿದ್ದು, ಅವರ ಮಾರ್ಗದರ್ಶನದಂತೆ ಪ್ರಸ್ತುತ ಯುವಜನತೆ ಮುಂದುವರಿಯುವ ಶ್ಲಾಘನೀಯ ಎಂದು ವಿವರಿಸಿದರು.
ವಿಶ್ವವನ್ನೇ ಭಾದಿಸಿದ್ದ ಕರೊನಾ ಸಂದರ್ಭದಲ್ಲಿ ಶಾಸಕ ಕೆ.ಎಂ.ಉದಯ್ ತಮ್ಮದೇ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸ್ಥಳೀಯ ಜನರ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡ ದಿನಗಳನ್ನು ನೆನಪಿಸಿದ ಶ್ರೀಗಳು, ಮದ್ದೂರು ಕ್ಷೇತ್ರದ ಜನರು ಶಾಸಕರಾಗಿ ಕ್ಷೇತ್ರದಾದ್ಯಂತ ಪಕ್ಷಭೇದ ಮರೆತು ನಿರೀಕ್ಷೆಗೂ ಮೀರಿದ ಅಭಿವೃದ್ಧಿ, ಶಿಕ್ಷಣ ಮತ್ತು ಧಾರ್ಮಿಕ ಕಾರ್ಯಗಳಿಗೆ ಒತ್ತು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಎಂ.ಉದಯ್ ಮಾತನಾಡಿ, ಕೆ.ಹಾಗಲಹಳ್ಳಿ ಗ್ರಾಮವು ತನ್ನದೇ ಆದ ಐತಿಹ್ಯ ಹೊಂದಿದ್ದು ಮೂಲ ಸೌಲಭ್ಯಗಳ ಕಲ್ಪಿಸುವ ಸಂಬಂಧ ಈಗಾಗಲೇ 6 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಮಳೆನೀರು ಚರಂಡಿ ಇತರ ಕಾರ್ಯಗಳಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರಲ್ಲದೆ, 4 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ಗ್ರಾಮದ ಅಭಿವೃದ್ಧಿಗೆ ವೇದಿಕೆಯಲ್ಲಿ ಘೋಷಿಸಿದರು.
ಅಭಿನಂದನೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ದಾನಿಗಳು ನಿಶ್ಚಲಾನಂದನಾಥ ಶ್ರೀಗಳಿಗೆ ಪಾದಪೂಜೆ ನೆರವೇರಿಸುವ ಜತೆಗೆ ದೇವಾಲಯದ ಪುನಶ್ಚೇತನ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಸಹಾಯಹಸ್ತ ನೀಡಿದ ದಾನಿಗಳನ್ನು ಅಭಿನಂದಿಸಿದರು.
ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಚಂದೂಪುರ ಶಿವಲಿಂಗೇಗೌಡ, ತಾಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ರವೀಶ್, ಮುಖಂಡರಾದ ಮಂಜಣ್ಣ, ನಿಜವೀರಪ್ಪ, ಪುಟ್ಟಸ್ವಾಮಿಗೌಡ, ಶೇಖರ್, ಸುರೇಶ್, ಕುಮಾರ್, ಶಶಿಕುಮಾರ್, ಸುರೇಂದ್ರ, ಮೋಹನ್, ವೆಂಕಟೇಶ, ಸೋಮಶೇಖರ್, ರಘು, ಶೇಖರ್, ಮಂಜುನಾಥ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.