ಹೋಂ ಸ್ಟೇ ಬಂದ್ 
ಮಂಡ್ಯ

ಎರಡು ಹೋಂ ಸ್ಟೇಗಳು ಬಂದ್

ಲೋಕೇಶ್ ಮನು. ಡಿ
ಶ್ರೀರಂಗಪಟ್ಟಣ: ಜೀವನದಿ ಕಾವೇರಿ ತೀರದ ಕೃಷಿ ಜಮೀನಿನ ಬಫರ್‌ಜೋನ್ ಒತ್ತುವರಿ ಮಾಡಿ ಅನಧಿಕೃತವಾಗಿ ನಡೆಸಲಾಗುತ್ತಿದ್ದ ಎರಡು ಹೈ-ಫೈ ಹೋಂ ಸ್ಟೇಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಖಡಕ್ ಆದೇಶ ನೀಡಿದ್ದಾರೆ.
ಪಟ್ಟಣ ಹೊರವಲಯದ ಚಂದ್ರವನದಲ್ಲಿನ ಬಂಗಾರದೊಡ್ಡಿ ನಾಲೆ ಅಣೆಕಟ್ಟೆ ಸಮೀಪ ಕಾವೇರಿ ನದಿ ಪಕ್ಕದ ಸರ್ವೇ ನಂ.174/9ರ ಆತ್ಮವೇದ ಹಾಗೂ ಸರ್ವೇ ನಂ.174/5ರ ಇಂದ್ರ ನೀಲ ದತ್ತ ಪ್ರಜ್ಞ ಹೆಸರಿನ ಹೋಂ ಸ್ಟೇಗಳ ವಿರುದ್ಧ ವಿಜಯವಾಣಿ ಪತ್ರಿಕಾ ವರದಿ ಪ್ರಕಟ ಹಾಗೂ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಸ್ವಪ್ರೇರಣೆಯಿಂದ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಸಂಬಂಧ ಸ್ಥಳಿಯ ತಹಸೀಲ್ದಾರ್, ಪಾಂಡವಪುರ ಉಪ ವಿಭಾಗಧಿಕಾರಿ ಹಾಗೂ ಕಾವೇರಿ ನೀರಾವರಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪ್ರಕರಣ ಸಂಬಂಧಿಸಿದಂತೆ ವರದಿ ಪಡೆದು ತನಿಖೆ ನಡೆಸಿದ್ದು, ಸರಿಯಾದ ದಾಖಲೆ ಹಾಗೂ ಸೂಕ್ತ ಮಾಹಿತಿ ಸಲ್ಲಿಸಿ ಸ್ಪಷ್ಟೀಕರಣ ನೀಡದ ಕಾರಣ ಅಕ್ರಮ ಮತ್ತು ಅತಿಕ್ರಮ ಎಂದು ಪರಿಗಣಿಸಿ ನದಿಯ ಗಡಿ ಗುರುತು, ಬಫರ್ ವಲಯದಲ್ಲಿ ನಿರ್ಮಾಣವಾಗಿದ್ದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ವಾಣಿಜ್ಯ ಉದ್ಯಮಗಳ ಮಾನ್ಯತೆ ರದ್ದುಗೊಳಿಸುವಂತೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಚೇತನಾ ಯಾದವ್ ಅವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷರು ಆದ ಡಾ.ಕುಮಾರ ರಂಗನತಿಟ್ಟು ಪಕ್ಷಿಧಾಮ ಮಾನಿಟರಿಂಗ್ ಕಮಿಟಿ ಅನುಮತಿ ಹಾಗೂ ಮಂಡ್ಯದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ನೀಡಲಾಗಿದ್ದ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಹೋಂ ಸ್ಟೇಗಳನ್ನು ಬಂದ್ ಮಾಡುವಂತೆ ಬುಧವಾರ ಆದೇಶ ನೀಡಿದ್ದಾರೆ.