ದರ್ಶನ್ ಪುಟ್ಟಣ್ಣಯ್ಯ  
ಮಂಡ್ಯ

15ರಿಂದ ಬೇಬಿಬೆಟ್ಟದ ಭಾರಿ ದನಗಳ ಜಾತ್ರೆ

ಲೋಕೇಶ್ ಮನು. ಡಿ
ಪಾಂಡವಪುರ: ತಾಲೂಕಿನ ಐತಿಹಾಸಿಕ, ಪುರಾಣ ಪ್ರಸಿದ್ಧ ಬೇಬಿಬೆಟ್ಟದ ಭಾರಿ ದನಗಳ ಜಾತ್ರಾ ಮಹೋತ್ಸವ ಫೆ.15 ರಿಂದ 23ರವರೆಗೆ ಆಯೋಜಿಸಿದ್ದು, ಮಹಾಶಿವರಾತ್ರಿಯಂದು ಸಂಜೆ 4 ಗಂಟೆಗೆ ಜಾತ್ರೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಈ ಬಾರಿಯ ದನಗಳ ಜಾತ್ರಾಮಹೋತ್ಸವವನ್ನು ಪದ್ಮಶ್ರೀ ಪುರಸ್ಕೃತ ಪುಸ್ತಕ ಪ್ರೇಮಿ ಎಂ.ಅಂಕೇಗೌಡ ಉದ್ಪಾಟಿಸಲಿದ್ದು, ಬೇಬಿಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಬೇಬಿಬೆಟ್ಟದ ದನಗಳ ಜಾತ್ರಾಮಹೋತ್ಸವ ಸಮಿತಿ ಸದಸ್ಯರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಬೇಬಿಬೆಟ್ಟದ ತಪ್ಪಲಿನ ಜಾತ್ರಾ ಮಾಳದಲ್ಲಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳುವ ರೈತರು ಮತ್ತು ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರು, ದನಗಳ ತೊಟ್ಟಿಗಳು, ಗೊಂತುಗಳು, ವಿದ್ಯುತ್ ದೀಪ ಸೇರಿದಂತೆ ಎಲ್ಲ ಸೌಕರ್ಯ ಒದಗಿಸಲಾಗಿದೆ. ಜಾತ್ರಾ ಸ್ಥಳದಲ್ಲಿ ಪಶುವೈದಕೀಯ ಕೇಂದ್ರ, ಆರೋಗ್ಯ ಕೇಂದ್ರ, ತಾತ್ಕಾಲಿಕ ಪೊಲೀಸ್ ಹೊರ ಠಾಣೆ ತೆರೆಯಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ರೈತರಿಗೆ ಮಾಹಿತಿ ಕೇಂದ್ರ: ಜಾತ್ರೆಯಲ್ಲಿ ಭಾಗವಹಿಸುವ ರೈತರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ನೀರಾವರಿ ಸೇರಿದಂತೆ ಇತರ ಇಲಾಖೆಗಳಿಂದ ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲಾಗುವುದು. ರೈತರಿಗೆ ಮಾಹಿತಿ ನೀಡುವ ಜತೆಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕೇಂದ್ರ ತೆರೆಯಲಾಗುವುದು ಎಂದರು.
ಕ್ರೀಡೆ, ಸಾಂಸ್ಕತಿಕ, ನಾಟಕ:
ಜಾತ್ರೆಯಲ್ಲಿ ಭಾಗವಹಿಸುವ ರೈತರಿಗೆ ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಜತೆಗೆ ವಿವಿಧ ಕ್ರೀಡೆಗಳು, ಮಹಿಳಾ ಉತ್ಸವ ನಡೆಯಲಿದೆ ಎಂದು ಹೇಳಿದರು.
19ಕ್ಕೆ ಸಾಮೂಹಿಕ ಮದುವೆ: ಜಾತ್ರಾ ಮಹೋತ್ಸವದಲ್ಲಿ ಫೆ.19ರಂದು ಸರಳ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದ್ದು, ಈಗಾಗಲೇ 25 ಜೋಡಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಮದುವೆಯಾಗುವ ಆಸಕ್ತರು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಶಾಸಕ ದರ್ಶನ್, ನವ ಜೋಡಿಗಳಿಗೆ ಉಚಿತವಾಗಿ ತಾಳಿ, ಕಾಲುಂಗುರ, ಸೀರೆ, ಬಟ್ಟೆ ನೀಡಲಾಗುವುದು ಎಂದು ತಿಳಿಸಿದರು.
ಉತ್ತಮ ರಾಸುಗಳಿಗೆ ಬಹುಮಾನ:ಜಾತ್ರೆಯಲ್ಲಿ ಭಾಗವಹಿಸುವ ಹಾಲಲ್ಲದೆ, 2, 4, 6, 8 ಹಲ್ಲಿನ ಉತ್ತಮ ಜೋಡೆತ್ತುಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು. ಫೆ.17ರ ಸಂಜೆಯೊಳಗೆ ಜಾನುವಾರುಗಳೊಂದಿಗೆ ಜಾತ್ರೆಯಲ್ಲಿ ಭಾಗಹಿಸುವ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ, ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವೈ.ಪಿ.ಮಂಜುನಾಥ್, ಸಂಘಟನಾ ಕಾರ್ಯದರರ್ಶಿ ಹಿರೇಮರಳಿ ಶಿವಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಹಾರೋಹಳ್ಳಿ ಸತೀಶ್ ಕುಮಾರ್, ಮುಖಂಡರಾದ ಶ್ಯಾದನಹಳ್ಳಿ ಜಯರಾಮ್, ಹಿರೇಮರಳಿ ಸತ್ಯಪ್ಪ, ಸುನೀಲ್ ಇದ್ದರು.