ನಾಗಮಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಮಂಡ್ಯ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಗರ್ಭಕಂಠ ಕ್ಯಾನ್ಸರ್ ತಪಾಸಣೆ ಹಾಗೂ ಜಾಗೃತಿ ಶಿಬಿರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಡಾ.ಮೋಹನ್, ಡಾ.ಎಚ್.ಸಿ.ಸವಿತಾ, ಡಾ.ನಾರಾಯಣ್ ಇದ್ದರು. 
ಮಂಡ್ಯ

ಗರ್ಭಕಂಠ ಕ್ಯಾನ್ಸರ್ ಮುಕ್ತ ಜಿಲ್ಲೆಯಾಗಲಿ

ಲೋಕೇಶ್ ಮನು. ಡಿ
ನಾಗಮಂಗಲ: ಗರ್ಭಕಂಠ ಕ್ಯಾನ್ಸರ್‌ನಿಂದ ದೇಶದಲ್ಲಿ ಸಾವಿರಾರು ಜನ ಸಾಯುತ್ತಿದ್ದು, ಕಾಲಕಾಲಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಹಾಗೂ ವ್ಯಾಕ್ಸಿನ್ ಪಡೆಯುವ ಮೂಲಕ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ. ಆ ನಿಟ್ಟಿನಲ್ಲಿ ನಮ್ಮ ಜಿಲ್ಲೆ ಮೊದಲಿಗೆ ಗರ್ಭಕಂಠ ಕ್ಯಾನ್ಸರ್‌ಮುಕ್ತ ಜಿಲ್ಲೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿಶ್ವಕ್ಯಾನ್ಸರ್ ದಿನದ ಅಂಗವಾಗಿ ಮಂಡ್ಯ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಗರ್ಭಕಂಠ ಕ್ಯಾನ್ಸರ್ ತಪಾಸಣೆ ಹಾಗೂ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸರ್ಕಾರ ಹಲವು ಜನಪರವಾದ ಕಾರ್ಯಕ್ರಮಗಳನ್ನು ಕೊಡುವ ಜತೆಗೆ ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಹೊಸ ಯೋಜನೆಗಳನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರ ಜೀವನ ಸ್ಥಿರತೆಯಿಂದಿರಲು ಆರೋಗ್ಯ ಇಲಾಖೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಜಿಲ್ಲೆಯ 56 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಗಳೂರಿನ ಖಾಸಗಿ ಕಂಪನಿಯ ಸಿಎಸ್‌ಆರ್ ನಿಧಿಯಡಿ ಇಸಿಜಿ ಮೆಷಿನ್ ನೀಡಲಾಗಿದೆ. ಜೆಡಿಎಸ್‌ನವರು ಸಿಎಸ್‌ಆರ್ ಫಂಡ್ ಕೊಟ್ಟಿದ್ದೇವೆ ಎಂದು ಪ್ರಚಾರ ಪಡೆಯುತ್ತಾರೆ. ಆದರೆ ನಾವು ಮಾಡಿರೋದನ್ನು ಎಲ್ಲಿಯೂ ಹೇಳೊದಿಕ್ಕೆ ಹೋಗಲ್ಲ. ನನಗೆ ಪ್ರಚಾರಕ್ಕಿಂತ ಜಿಲ್ಲೆಯ ಅಭಿವೃದ್ಧಿ ಮುಖ್ಯವಷ್ಟೇ. ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು 14 ವರ್ಷದ ಹೆಣ್ಣುಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಪ್ರತಿಯೊಬ್ಬ ಮಹಿಳೆಯು ಮೂರು ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ ನಮ್ಮ ಜಿಲ್ಲೆಯನ್ನು ಗರ್ಭಕಂಠ ಕ್ಯಾನ್ಸರ್ ಮುಕ್ತ ಜಿಲ್ಲೆಯನ್ನಾಗಿಸಲು ವೈದ್ಯರು ಹಾಗೂ ಸಾರ್ವಜನಿಕರು ಕೈಜೋಡಿಸಿ ಎಂದರು.
ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಮಾತನಾಡಿ, ಗರ್ಭಕೋಶ ಕ್ಯಾನ್ಸರ್‌ನಿಂದ ದೇಶದಲ್ಲಿ ಸಾವಿರಾರು ಮಂದಿ ನರಳುತ್ತಿದ್ದಾರೆ. ಈ ರೋಗವನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದಾಗಿದೆ. ದೇಶದಲ್ಲಿ ಪ್ರತಿವರ್ಷ 1.23 ಲಕ್ಷ ಜನ ಈ ರೋಗಕ್ಕೆ ಒಳಗಾಗುತ್ತಿದ್ದಾರೆ. ಈ ಪೈಕಿ 7,7300 ಜನ ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ. ಈ ಕ್ಯಾನ್ಸರ್ ಸಂಪೂರ್ಣವಾಗಿ ಗುಣಪಡಿಸಬಹುದಾದ ರೋಗವಾಗಿದ್ದು, ಈ ರೋಗ ಬರಲು ಕಾರಣ ಅಕಾಲಿಕ ವಿವಾಹ, ಹೆಚ್ಚು ಮಕ್ಕಳ ಜನನ, ಸ್ವಚ್ಛತೆಯ ಕೊರತೆಯಿಂದಾಗಿದೆ. ಇದು ಲೈಂಗಿಕ ರೋಗವಾಗಿದ್ದು, ರೋಗ ಲಕ್ಷಣಗಳು ಕೆಲವೊಮ್ಮೆ ಕಂಡುಬರುವುದಿಲ್ಲ. ತಪಾಸಣೆಗೊಳಪಟ್ಟಾಗಷ್ಟೆ ಈ ರೋಗ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯು 3 ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಡಿವೈಎಸ್ಪಿ ಚಲುವರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ್, ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆಡಾ.ಎಚ್.ಸಿ.ಸವಿತಾ, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಡಾ.ಶಿಲ್ಪಾ, ಡಾ.ಬಿ.ಎಸ್.ಶಶಿಕಲಾ ಇದ್ದರು.