ನಾಗಮಂಗಲ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ಆಯೋಜಲಾಗಿತ್ತು. ಡಾ.ಕೃಷ್ಣ, ಡಾಮೋಹನ್, ಡಾ.ನಾರಾಯಣ್ ಇದ್ದರು. 
ಮಂಡ್ಯ

ರೋಗಿಗಳಿಗೆ ಚಿಕಿತ್ಸೆ ನಿರ್ಲಕ್ಷ್ಯಿಸಿದರೆ ಶಿಸ್ತುಕ್ರಮ

ಲೋಕೇಶ್ ಮನು. ಡಿ
ನಾಗಮಂಗಲ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲವೆಂಬ ದೂರುಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಸೂಕ್ತ ಚಿಕಿತ್ಸೆ ನೀಡದಿರುವ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಮಟ್ಟದ ಆಸ್ಪತ್ರೆ ಎಂದರೆ ದಿನದ 24 ಗಂಟೆಯೂ ಬಾಗಿಲು ತೆರೆದು ಚಿಕಿತ್ಸೆ ನೀಡಬೇಕು. ಆದರೆ ರಾತ್ರಿ ಸಮಯದಲ್ಲಿ ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕ ಹಾಗೂ ಮುಖ್ಯದ್ವಾರ ಎರಡು ಬಾಗಿಲುಗಳನ್ನು ಮುಚ್ಚಲಾಗಿರುತ್ತದೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದಿವೆ. ರಾತ್ರಿ ಸಮಯದಲ್ಲಿ ಬರುವಂತಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ಈ ವರ್ತನೆ ಮುಂದುವರಿದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ರಾತ್ರಿ ಸಮಯದಲ್ಲಿ ಬರುವಂತಹ ರೋಗಿಗಳಿಗೆ ತುರ್ತು ಔಷಧ ವಿತರಣೆ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಆಸ್ಪತ್ರೆ ಎಂಬುದು ಒಂದು ದೇವಾಲಯವಿದ್ದಂತೆ. ಅದು ಸ್ವಚ್ಛವಾಗಿದ್ದರೆ ರೋಗಿಗಳು ಕೂಡ ಬೇಗ ಗುಣಮುಖರಾಗಲಿದ್ದಾರೆ. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ರೋಗಿಗಳ ಜತೆ ಸೌಜನ್ಯದಿಂದ ವರ್ತಿಸಬೇಕು ಎಂದು ವೈದ್ಯರು ಹಾಗೂ ಸಿಬ್ಬಂದಿಗೆ ತಿಳಿಸಿದರು.
ಈ ಸಂದರ್ಭ ಆಸ್ಪತ್ರೆಯಲ್ಲಿ ಕೆಲವು ಕಾಮಗಾರಿಗಳು ಆಗಬೇಕೆಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಆಸ್ಪತ್ರೆಯ ಆಪರೇಷನ್ ಕೊಠಡಿಗಳ ದುರಸ್ತಿಗೆ ಸೂಚಿಸಲಾಯಿತು. ಆಸ್ಪತ್ರೆಗೆ ಮೆಡಿಸಿನ್‌ಗಳ ಕೊರತೆಯಿದ್ದು, ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಲು ಸಂಬಂಧಿಸಿದವರಿಗೆ ಸೂಚಿಸುವುದಾಗಿ ಸಚಿವರು ತಿಳಿಸಿದರು.
ನೂತನ ಶವಾಗಾರ ನಿರ್ಮಾಣ: ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಶವಾಗಾರ ಶಿಥಿಲವಾಗಿದ್ದು, ಹಳೇ ಮಾದರಿಯಲ್ಲಿದೆ. ಇದನ್ನು ನೂತನವಾಗಿ ನಿರ್ಮಿಸಿಕೊಡಿ ಎಂಬುದು ಸಾರ್ವಜನಿಕರು ಹಾಗೂ ಅಧಿಕಾರಿಗಳ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್‌ಗುಂಡುರಾವ್ ಜತೆ ಚರ್ಚಿಸಿ ನೂತನ ಶವಾಗಾರ ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಗಿತ್ತು. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಶೈಲಿಯ ಶವಾಗಾರ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಉಚಿತ ಆಂಬುಲೆನ್ಸ್: ಇದುವರೆಗೂ 108 ಆಂಬುಲೆನ್ಸ್ ಮಾತ್ರ ಉಚಿತವಾಗಿ ಸೇವೆ ನೀಡುತ್ತಿತ್ತು. ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್‌ಗೆ ಕಿ.ಮೀ.ಗೆ ಇಂತಿಷ್ಟು ಎಂದು ದರ ನಿಗದಿಪಡಿಸಲಾಗಿತ್ತು. ಆದರೆ ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಕೂಡ ಉಚಿತವಾಗಿ ಸೇವೆ ನೀಡಲಿವೆ. ರೋಗಿಗಳು ಯಾವುದೇ ಹಣ ಪಾವತಿಸಬೇಕಿಲ್ಲ. ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುವ ಸಂದರ್ಭ ಆಸ್ಪತ್ರೆಯ ಆಂಬುಲೆನ್ಸ್‌ಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಅದು ಲಭ್ಯ ಇಲ್ಲದಂತಹ ಸಂದರ್ಭದಲ್ಲಿ 108 ಆಂಬುಲೆನ್ಸ್ ಬಳಸಿಕೊಳ್ಳಿ. ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಅನಾಹುತವಾದರೂ 108 ಆಂಬುಲೆನ್ಸ್ ಸೇವೆ ನೀಡಬೇಕಿರುವುದರಿಂದ ಅದನ್ನು ಪಾಲಿಸಿ ಎಂದು ಸೂಚಿಸಿದರು.
ಈ ಸಂದರ್ಭ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ್ ಇತರರುಇದ್ದರು.