ನಾಗಮಂಗಲ ಪಟ್ಟಣದ ಕೃಷಿ ಭವನದ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಾಲೂಕಿನ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಹಾಗೂ ಆಡಳಿತಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಶ್ರೀನಿವಾಸ್, ಅಶೋಕ್, ಆದರ್ಶ್, ಸತೀಶ್ ಇದ್ದರು.
ನಾಗಮಂಗಲ: ಬೇಸಿಗೆ ಸಮೀಪಿಸುತ್ತಿದ್ದು, ತಾಲೂಕಿನಲ್ಲಿ ಯಾವೊಂದು ಗ್ರಾಮದಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಾಲೂಕಿನ ಪಿಡಿಒಗಳಿಗೆ ಖಡಕ್ ಸೂಚನೆ ನೀಡಿದರು.
ಪಟ್ಟಣದ ಕೃಷಿ ಭವನದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕಿನ ಎಲ್ಲ ಗ್ರಾಪಂಗಳ ಪಿಡಿಒಗಳು ಹಾಗೂ ಆಡಳಿತಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರಿಗೆ ನಮ್ಮ ತಾಲೂಕಿನಲ್ಲಿ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ. ಯಾವೊಂದು ಗ್ರಾಮದಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಯಾವ ಗ್ರಾಮದಲ್ಲಿ ಕಳೆದ ವರ್ಷ ಕುಡಿಯುವ ನೀರಿನ ಸಮಸ್ಯೆಯಿತ್ತು. ಅಂತಹ ಗ್ರಾಮಗಳಲ್ಲಿ ಈಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ. ಕೆಲವೆಡೆ ಸರ್ಕಾರಿ ಬೋರ್‌ವೆಲ್‌ಗಳಲ್ಲಿ ನೀರು ಬಾರದಿದ್ದರೆ ಅಂತಹ ಕಡೆ ಖಾಸಗಿ ಕೊಳವೆ ಬಾವಿಗಳಿಗೆ ಸರಿಯಾಗಿ ಹಣ ಪಾವತಿಸಿ ಬಳಸಿಕೊಳ್ಳಿ. ಇನ್ನೊಂದು ವರ್ಷದಲ್ಲಿ ಜಲಜೀವನ್ ಮಿಷನ್ ಯೋಜನೆ ಪೂರ್ಣಗೊಂಡರೆ ಆನಂತರ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಈ ಒಂದು ವರ್ಷ ತುಂಬಾ ಗಂಭೀರವಾಗಿ ತೆಗೆದುಕೊಂಡು ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಕುಡಿಯುವ ನೀರಿನ ಜತೆಗೆ ರಾಸುಗಳಿಗೆ ಮೇವಿನ ಕೊರತೆಯಾಗದಂತೆ ತಾಲೂಕು ಆಡಳಿತ ಕ್ರಮ ವಹಿಸಬೇಕು. ಪ್ರತಿ 15 ದಿನಕ್ಕೊಮ್ಮೆ ಪಿಡಿಒಗಳು ಆ ವ್ಯಾಪ್ತಿಯ ಕಂದಾಯ ಇಲಾಖೆಯ ಆರ್‌ಐಗಳಿಗೆ ಕುಡಿಯುವ ನೀರಿಗೆ ಸಂಬಂಧಿಸಿದ ಮಾಹಿತಿಯ ವರದಿ ನೀಡಬೇಕು. ಪ್ರತಿ ವಾರಕ್ಕೊಮ್ಮೆ ಪಿಡಿಒಗಳು ಸಭೆ ನಡೆಸಿ ವರದಿ ತಾಪಂ ಇಒ ಅವರಿಗೆ ನೀಡಬೇಕು ಎಂದು ಸೂಚಿಸಿದರು.
ತಾಲೂಕಿನ 86 ಜನ ನೀರುಗಂಟಿಗಳನ್ನು ಪರ್ಮನೆಂಟ್ ಮಾಡಲಾಗಿದೆ. ಸಿಕ್ಕ ಅವಕಾಶದಲ್ಲಿ ಜನರಿಗೆ ಹೇಗೆಲ್ಲ ಒಳ್ಳೆಯದು ಮಾಡಲು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಆದರೆ ಅವರು ಕೆಲಸ ಮಾಡಿಕೊಟ್ಟವರನ್ನು ನೆನಪಿಟ್ಟುಕೊಂಡರೆ ಅಷ್ಟೇ ನನಗೆ ದೊಡ್ಡ ಕೊಡುಗೆ. ಕೆಲಸ ಮಾಡಿಕೊಟ್ಟವರಿಗೆ ಅವರು ಕೃತಜ್ಞರಾಗಿರಲಿ. ತಾಲೂಕಿನಲ್ಲಿ 3,502 ಜನರಿಗೆ ಆಶ್ರಯ ಯೋಜನೆಯಡಿ ಮನೆ ಕಟ್ಟಿದ್ದಾರೆ. ಅವರಿಗೆ ಮಾರ್ಟ್‌ಗೇಜ್ ಅನ್ನು ಬಿಡುಗಡೆ ಮಾಡಿ ಮಾಲೀಕತ್ವ ನೀಡಲಾಗಿದೆ. ಇ-ಸ್ವತ್ತು 58 ಸಾವಿರ ಬಾಕಿ ಇದ್ದು, 16 ಸಾವಿರ ಇ-ಸ್ವತ್ತು ಆಗಿದೆ. ಇ-ಸ್ವತ್ತು ಮಾಡುವುದು ವೇಗವಾಗಬೇಕಿದೆ. ಸಾರ್ವಜನಿಕರಿಗೆ ಅಡಚಣೆಯಾಗುವಂತಹ ಸಮಸ್ಯೆಗಳಿಗೆ ಪಿಡಿಒಗಳು ಮೊದಲು ಪರಿಹರಿಸಿ. ಪಿಡಿಒಗಳು ನಿಮ್ಮ ಆತ್ಮತೃಪ್ತಿಗೆ ಕೆಲಸ ಮಾಡಿ. ಆಡಳಿತಾಧಿಕಾರಿಗಳು ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಒಬ್ಬ ಪಿಡಿಒ ಎರಡು ಕಡೆ, ಮೂರು ಕಡೆ ಕೆಲಸ ಅನ್ನೊದನ್ನೆ ನೆಪ ಮಾಡಿಕೊಳ್ಳಬೇಡಿ. ಇದು ಎಲ್ಲ ಇಲಾಖೆಗಳಲ್ಲಿಯೂ ಇರುವಂತಹ ಸಮಸ್ಯೆಯಾಗಿದೆ. ಮೂರು ದಿನವಾದರೂ ಪಂಚಾಯಿತಿಗೆ ಹೋಗುವುದಿಲ್ಲ. ಎರಡು ಕಡೆ ಇದ್ದರೆ ಯಾವ ಯಾವ ದಿನ ಯಾವ ಪಂಚಾಯತಿಯಲ್ಲಿ ಲಭ್ಯವಿರುತ್ತೀರಿ ಅಂತ ಬೋರ್ಡ್ ಹಾಕಿ ಎಂದರು.
ವಿದ್ಯುತ್ ಸಂಪರ್ಕ ಸರಳೀಕರಣ:ಮನೆ ನಿರ್ಮಿಸಿ ವಿದ್ಯುತ್ ಸಂಪರ್ಕ ಪಡೆಯಲು ಸೆಸ್ಕ್‌ನವರು ಗ್ರಾಮ ಪಂಚಾಯಿತಿಯಿಂದ ಎನ್‌ಒಸಿ ಅಥವಾ ಗ್ರಾಮ ಆಡಳಿತಾಧಿಕಾರಿಗಳ ದೃಢೀಕರಣವನ್ನು ಕೇಳುತ್ತಿದ್ದರು. ಇದನ್ನು ಸರಳೀಕರಣಗೊಳಿಸಿದ್ದು, ಯಾವುದೇ ಎನ್‌ಒಸಿ ಹಾಗೂ ದೃಢೀಕರಣವಿಲ್ಲದೆ ಮಾಲೀಕತ್ವದ ದಾಖಲೆಗಳ ಆಧಾರದ ಮೇಲೆ ವಿದ್ಯುತ್ ಸಂಪರ್ಕ ನೀಡುವಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರು ನೇರವಾಗಿ ಸೆಸ್ಕ್ ಅಧಿಕಾರಿಗಳ ಬಳಿ ಬಂದರೆ ಗುತ್ತಿಗೆದಾರರನ್ನು ಸಂಪರ್ಕಿಸಿ ಎನ್ನುವ ದೂರುಗಳು ಕೇಳಿಬರುತ್ತಿವೆ. ಈ ರೀತಿಯ ದೂರುಗಳು ಮತ್ತೆ ಬಂದರೆ ನಾನು ಸಹಿಸುವುದಿಲ್ಲ. ಸರ್ಕಾರಿ ಹಣ ಎಷ್ಟು ಪಾವತಿಸಬೇಕು ಅಷ್ಟನ್ನು ಪಾವತಿಸಿಕೊಂಡು ಕೆಲಸ ಮಾಡಿಕೊಡಿ. ರೈತರನ್ನು ಸುತ್ತಾಡಿಸಿದರೆ ನಾನು ಸಹಿಸಲ್ಲ ಎಂದರು.
ಶೇ.100ರಷ್ಟು ಕಂದಾಯ ವಸೂಲಿಯಾಗಲಿ: ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಅನುದಾನದ ಅಗತ್ಯವೇ ಇಲ್ಲ. ಏಕೆಂದರೆ ನರೇಗಾ ಹಾಗೂ ಕಂದಾಯ ವಸೂಲಿಯಿಂದಲೇ ನಿಮ್ಮ ವ್ಯಾಪ್ತಿಯ ಅಭಿವೃದ್ಧಿ ಕೆಲಸ ಮಾಡಬಹುದಾಗಿದೆ. ಆದರೆ ಎಲ್ಲ ಪಿಡಿಒಗಳು ಕಂದಾಯ ವಸೂಲಿಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಶೇ.100 ರಷ್ಟು ಕಂದಾಯ ವಸೂಲಿ ಮಾಡಬೇಕು.
ಯಾರೂ ಕಂದಾಯ ವಸೂಲಿಯಲ್ಲಿ ಹಿನ್ನಡೆ ಇರುತ್ತಾರೆ ಅಂತಹ ಪಿಡಿಒಗೆ ನೋಟಿಸ್ ನೀಡಲು ಇಒ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀ ನಿವಾಸ್, ತಹಸೀಲ್ದಾರ್ ಆದರ್ಶ್, ತಾ.ಪಂ ಇಒ ಸತೀಶ್, ಜಂಟಿ ಕೃಷಿ ನಿರ್ದೇಶಕ ಹಾಗೂ ತಾ.ಪಂ. ಆಡಳಿತಾಧಿಕಾರಿ ಅಶೋಕ್ ಇತರರು ಇದ್ದರು.