ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ತಾಲೂಕಿನ ಸದ್ಭಕ್ತರು ಆಯೋಜಿಸಿದ್ದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳ ಸಂಸ್ಮರಣೆ ಹಾಗೂ ನಿಶ್ಚಲಾನಂದನಾಥ ಸ್ವಾಮೀಜಿಯ ಗುರುವಂದನಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.  
ಮಂಡ್ಯ

ನಾಗರಿಕರ ಸೇವೆ ಮಾಡಲು ಸನ್ಯಾಸ ದೀಕ್ಷೆ

ಲೋಕೇಶ್ ಮನು. ಡಿ
ಕೆ.ಆರ್.ಪೇಟೆ : ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಶ್ರೀಡಾ.ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳಿಬ್ಬರೂ ನನಗೆ ಅಧ್ಯಾತ್ಮ ಗುರುಗಳಾಗಿದ್ದರು. ಆದರೆ ನಾನು ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯಿಂದ ಸೇವಾ ದೀಕ್ಷೆ ಪಡೆದಿದ್ದೇನೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ತಾಲೂಕಿನ ಸದ್ಭಕ್ತರು ಆಯೋಜಿಸಿದ್ದ ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಸಂಸ್ಮರಣೆ ಹಾಗೂ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ನಾನು ಪೂರ್ವಾಶ್ರಮದಲ್ಲಿ ತಾಲೂಕಿನ ತಹಸೀಲ್ದಾರಾಗಿ, ಪಾಂಡವಪುರ ಉಪ ವಿಭಾಗದ ಉಪ ವಿಭಾಗಾಧಿಕಾರಿಯಾಗಿ, ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇನೆ. ನಾನು ಇನ್ನು ನಾಲ್ಕೈದು ವರ್ಷ ಸರ್ಕಾರಿ ಸೇವೆ ಮಾಡಿದ್ದರೆ, ಐಎಎಸ್ ಅಧಿಕಾರಿಯಾಗುತ್ತಿದ್ದೆ. ಆದರೆ ನಾನು ದೃಢವಾದ ಸಂಕಲ್ಪದಿಂದ ಅಧಿಕಾರವನ್ನು ತ್ಯಾಗ ಮಾಡಿ, ಶ್ರೀಸಾಮಾನ್ಯರು ಹಾಗೂ ಬಡಜನರಿಗೆ ಸಹಾಯ ಮಾಡಲು, ಜಾತಿ ಮತಗಳಿಂದ ಮುಕ್ತವಾದ ಆರೋಗ್ಯವಂತ ಸಮಾಜವನ್ನು ನಿರ್ಮಿಸಿ ನಾಗರಿಕರ ಸೇವೆ ಮಾಡಲು ಸನ್ಯಾಸತ್ವ ಪಡೆದು ಶ್ರೀ ಮಠವನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿದ್ದೇನೆ ಎಂದರು.
ನನ್ನ ಪೂಜ್ಯ ಗುರುಗಳಾದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಈ ಮೊದಲೇ ನನಗೆ ಇಟ್ಟಿದ್ದ ನಿಶ್ಚಲಾನಂದನಾಥ ಸ್ವಾಮೀಜಿ ಎಂಬ ಹೆಸರಿನಲ್ಲಿಯೇ ದೀಕ್ಷೆ ಪಡೆದುಕೊಂಡು ಸ್ವಾಮೀಜಿಯಾಗಿ ಕೆಲಸ ಮಾಡುತ್ತಿದ್ದೇನೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠಗಳೆರಡು ಒಕ್ಕಲಿಗ ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಎರಡೂ ಮಠಗಳು ವಿಶ್ವಮಾನವ ಪ್ರಜ್ಞೆ ಹೊಂದಿರುವ ನಾಡಿನ ಶ್ರೇಷ್ಠ ಮಠಗಳಾಗಿವೆ ಎಂದರು.
ಪಟ್ಟಣದ ಒಂದು ಮುಖ್ಯ ರಸ್ತೆಗೆ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ಹೆಸರಿಡುವ ಮೂಲಕ ಅವರ ಹೆಸರನ್ನು ತಾಲೂಕಿನಲ್ಲಿ ಚಿರಸ್ಥಾಯಿಯಾಗಿ ಉಳಿಸಬೇಕು ಎನ್ನುವುದು ನನ್ನ ಬಯಕೆಯಾಗಿದೆ. ಈ ದಿಕ್ಕಿನಲ್ಲಿ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು, ಶಾಸಕರು ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಹಾಗೆಯೇ ಪುರಸಭೆಯು ಒಂದು ಸುಸಜ್ಜಿತವಾದ ನಿವೇಶನವನ್ನು ನೀಡಿದರೆ ಗುರುಗಳ ಹೆಸರಿನಲ್ಲಿ ಒಂದು ಯೋಗ ಭವನವನ್ನು ನಿರ್ಮಿಸಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲು ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ. ಜಯಪ್ರಕಾಶ್ ಗೌಡ ಮಾತನಾಡಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠವು ಚೈತನ್ಯಶೀಲವಾಗಿದೆ. ಶ್ರಮಿಕ ವರ್ಗದ ಮಠವಾಗಿದ್ದು, ನಾಥ ಪರಂಪರೆಯ ಸಾಂಪ್ರದಾಯಗಳನ್ನು ನಾಡಿಗೆ ಸಂದೇಶವಾಗಿ ನೀಡುತ್ತಿದ್ದ ಕುಮಾರಸ್ವಾಮಿಗಳ ಶಿಷ್ಯರಾಗಿ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಅವರು ಸರ್ವ ಜನರ ಸಮಾನತೆ ಹಾಗೂ ಅಭಿವೃದ್ಧಿಯನ್ನು ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಸಮಾಜ ಸುಧಾರಣೆಗೆ ಹೆಜ್ಜೆ ಇಟ್ಟಿರುವ ಶ್ರೀಗಳಿಗೆ ಪ್ರತಿಯೊಬ್ಬರೂ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಜನ್ಮ ಪಡೆದಿದ್ದಾರೆ. ಮಂಡ್ಯ ಜಿಲ್ಲೆಯು ಶ್ರೀಯುತರ ಕರ್ಮಭೂಮಿಯಾಗಿದೆ. ಈ ಹಿಂದೆ ದಕ್ಷ ಆಡಳಿತಗಾರರಾಗಿದ್ದ ಶ್ರೀಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಲು ಸಂಕಲ್ಪ ಮಾಡಿ ಹೆಜ್ಜೆ ಹಾಕಿದ್ದಾರೆ. ಅವರ ಎಲ್ಲ ಸಮಾಜಮುಖಿ ಕೆಲಸಗಳಿಗೆ ಶ್ರೀಮಠದ ಭಕ್ತನಾಗಿ ನಾನು ಬೆಂಬಲಿಸುತ್ತೇನೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಮಾಜಿ ಶಾಸಕ ಬಿ. ಪ್ರಕಾಶ್, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಮೈಸೂರು ಲ್ಯಾಂಪ್ ಸಂಸ್ಥೆ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ಕರ್ನಾಟಕ ಕೈಗಾರಿಕಾ ಸಹಕಾರ ಮಹಾಮಂಡಲದ ಅಧ್ಯಕ್ಷ ಬಸ್ ಸಂತೋಷಕುಮಾರ್, ಮುಖಂಡರಾದ ವಿಜಯ್ ರಾಮೇಗೌಡ, ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಎಸ್.ಎಲ್. ಮೋಹನ್, ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಡಾ. ಅಶೋಕ್, ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ರೈತ ಮುಖಂಡ ಮಧುಗೆರೆ ರಾಜೇಗೌಡ, ರೈತ ನಾಯಕಿ ಕೆ. ಆರ್.ನಂದಿನಿ ಇತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ಬೆಳ್ಳಿ ಸಾರೋಟಿನಲ್ಲಿ ಕೂರಿಸಿ, ಜಾನಪದ ಕಲಾತಂಡಗಳ ವೈಭವದ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಯಿತು. ಚನ್ನರಾಯಪಟ್ಟಣದ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ನೀಡಿದ ಕೋಲಾಟ ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.