ಕಾಡುಕೊತ್ತನಹಳ್ಳಿಯ ಹೆಬ್ಬಕವಾಡಿ ನಾಲೆ ಬಳಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಕವಾಡಿ ನಾಲಾ ಆಧುನೀಕರಣ ಕಾಮಗಾರಿಗೆ ಶಾಸಕ ಕದಲೂರು ಉದಯ್ ಭೂಮಿಪೂಜೆ ನೆರವೇರಿಸಿದರು.
ಕೆ.ಎಂ.ದೊಡ್ಡಿ: ಗೆಜ್ಜಲಗೆರೆ ಸೇರಿದಂತೆ ಮದ್ದೂರಿನ ಸುತ್ತಮುತ್ತ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ನಗರಸಭೆಗೆ ಸೇರ್ಪಡೆ ಮಾಡಿರುವುದು ನನ್ನ ಸ್ವಾರ್ಥಕ್ಕಲ್ಲ. ಗ್ರಾಮಗಳ ಅಭಿವೃದ್ಧಿಗಾಗಿ ಎಂದು ಶಾಸಕ ಕದಲೂರು ಉದಯ್ ಹೇಳಿದರು.
ಸಮೀಪದ ಕಾಡುಕೊತ್ತನಹಳ್ಳಿ ಶ್ರೀಮಹದೇಶ್ವರ ದೇವಾಲಯದ ಸಮೀಪದ ಹೆಬ್ಬಕವಾಡಿ ನಾಲೆ ಬಳಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಕವಾಡಿ ನಾಲಾ ಆಧುನಿಕರಣ ಕಾಮಗಾರಿಗೆ ಭೂಮಿಪೂಜೆ ನೆರೆವೆರಿಸಿ ಮಾತನಾಡಿ, ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಗ್ರಾಪಂಗಳು ನಗರಸಭೆಗೆ ಸೇರಿದರೆ ಅಭಿವೃದ್ಧಿ ಸಾಧ್ಯ ಎಂಬ ಚಿಂತನೆ ಹೊಂದಿದ್ದೇನೆ ಎಂದು ತಿಳಿಸಿದರು.
ಜನರ ಕಲ್ಯಾಣಕ್ಕಾಗಿ ನಾನು ಸರ್ಕಾರ ಮಟ್ಟದಿಂದ ಪುರಸಭೆಯಿಂದ ನಗರಸಭೆಯನ್ನು ಮಾಡಿದ್ದೇನೆ. ಇದರಿಂದ ನನಗೆ ವೈಯಕ್ತಿಕ ಉಪಯೋಗವಿಲ್ಲದ್ದರೂ ಕೆಲವರು ನಗರಸಭೆಗೆ ಗ್ರಾಪಂಗಳ ಸೇರ್ಪಡೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಸರ್ಕಾರದಿಂದ 1,500 ಕೋಟಿ ರೂ.ಗೂ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತಿದ್ದು, ಈ ವಿಚಾರದಲ್ಲಿ ಯಾರ ಮುಲಾಜಿಗೂ ಒಳಗಾಗಿಲ್ಲ. ಕ್ಷೇತ್ರದ ರೈತರ ಹಾಗೂ ಜನತೆಯ ಕಲ್ಯಾಣಕ್ಕೆ ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಹೆಬ್ಬಕವಾಡಿ ನಾಲೆಯನ್ನು ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಸುಮಾರು 30 ರಿಂದ 40 ಗ್ರಾಮಗಳ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ರೈತರು ಭವಿಷ್ಯದ ದೃಷ್ಟಿಯಿಂದ ಒಂದು ಬೆಳೆಗೆ ಮಹತ್ವ ನೀಡದೆ ನಾಲಾ ಅಧುನೀಕರಣಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು ಮಾತನಾಡಿ, ಶಾಸಕ ಕದಲೂರು ಉದಯ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದ ವತಿಯಿಂದ 1, 600 ಕೋಟಿ ರೂ. ಗೂ ಹೆಚ್ಚಿನ ಅನುದಾನ ತಂದು ರಾಜ್ಯದ ಯಾವುದೇ ಶಾಸಕರರು ಮಾಡದ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಡುಕೊತ್ತನಹಳ್ಳಿಗೆ 2 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಒಂದೇ ಗ್ರಾಮಕ್ಕೆ ನೀಡಿದ್ದು ಹೆಬ್ಬಕವಾಡಿ ನಾಲೆ ವ್ಯಾಪ್ತಿಯ ಭಾಗದ ರೈತರು ಕಾಮಗಾರಿಗೆ ಹಾಗೂ ಶಾಸಕರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೋಸ್ಕರ ಹಗಲಿರುಳು ಶ್ರಮಿಸುತ್ತಿರುವ ಕೆ.ಎಂ.ಉದಯ್ ಅವರ ಕೆಲಸಗಳನ್ನು ಸಹಿಸದ ಕೆಲ ವಿರೋಧಿಗಳು ಶಾಸಕ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ವಿರೋಧಿಗಳ ಮಾತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಸಾರ್ವಜನಿಕರು ಸುಮಾರು 30ಕ್ಕೂ ಹೆಚ್ಚಿನ ಮನವಿಯನ್ನು ಸಲ್ಲಿಸಿದರು. ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಧಿಕಾರಿಗಳಿಂದ ಸೂಕ್ತ ಕ್ರಮ ವಹಿಸುವುದಾಗಿ ಶಾಸಕರು ಭರವಸೆ ನೀಡಿದರು. ನಂತರ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಂಕಷ್ಟದಲ್ಲಿದ್ದವರಿಗೆ ಆರ್ಥಿಕ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಇಇ ನಂಜುಂಡೇಗೌಡ, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಕಾಡುಕೊತ್ತನಹಳ್ಳಿ, ಗ್ರಾ.ಪಂ. ಅಧ್ಯಕ್ಷ ಜಯರಾಜು, ಮಾಜಿ ಅಧ್ಯಕ್ಷರಾದ ಯಡಗನಹಳ್ಳಿ ಕೆಂಚೇಗೌಡ, ದಯಾನಂದ್, ತಾಪಂ ಮಾಜಿ ಸದಸ್ಯ ಕಪನಿಗೌಡ, ಕೆಪಿಸಿಸಿ ಸದಸ್ಯ ಎಸ್.ಚಿದಂಬರ ಮೂರ್ತಿ, ಮುಖಂಡರಾದ ಮಾದೇಗೌಡ, ಕೆ.ಸಿ.ಮಹದೇವು, ಎಸ್ಸಿ ಬ್ಲಾಕ್ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಯಡಗನಹಳ್ಳಿ ಕೆಂಚೆಗೌಡ, ಗ್ರಾಪಂ ಉಪಾಧ್ಯಕ್ಷ ಲೋಕೇಶ್, ಎಇಇ ರಾಜೇಶ್ ಇತರರಿದ್ದರು.