ಮಳವಳ್ಳಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ಸಿಡಿ ಹಬ್ಬದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಡಾ. ಲೋಕೇಶ್, ಶ್ರೀನಿವಾಸ್, ಯಶವಂತ್ ಕುಮಾರ್, ಶ್ರೀಧರ್, ಬಸವರಾಜು, ನಾಗರತ್ನಾ ಇದ್ದರು.
ಮಳವಳ್ಳಿ:ಪಟ್ಟಣದ ಎಲ್ಲ ಕೋಮಿನ ಯಜಮಾನರು ಹಾಗೂ ಮುಖಂಡರು ಒಮ್ಮತದಿಂದ ಸಮ್ಮತಿಸಿದರೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ಪಟ್ಟಣದಲ್ಲಿ ಜ.27ರಿಂದ 31ರವರೆಗೆ ದಂಡಿನಮಾರಮ್ಮ ಮತ್ತು ಸಿಡಿ ಹಬ್ಬ ಆಚರಣೆಗೆ ಸಹಕಾರ ನೀಡುವುದಾಗಿ ಉಪವಿಭಾಗಾಧಿಕಾರಿ ಶಿವಮೂರ್ತಿ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಿಡಿ ಹಬ್ಬ ಆಚರಣೆ ಸಂಬಂಧ ಆಯೋಜಿಸಿದ್ದ ಪೂರ್ವಭಾವಿಸಭೆಯ ಅಧ್ಯಕ್ಷತೆ ವಹಿಸಿದ್ದ ಎಲ್ಲ ಕೋಮಿನ ಯಜಮಾನರು ಹಾಗೂ ಮುಖಂಡರೊಡನೆ ಸಲಹೆ ಪಡೆದು ಮಾತನಾಡಿದರು.
ಸಿಡಿ ಬಂಡಿ ಎಳೆಯುವ ನೇತೃತ್ವ ವಹಿಸುವ ಯಜಮಾನ್ ಮೊಗಣ್ಣ ಮಾತನಾಡಿ, ಸಿಡಿಬಂಡಿ ಹೋಗುವ ಬೀದಿಗಳಲ್ಲಿ ಯಾವುದೇ ಅಡಚಣೆಯಾಗದಂತೆ ರಸ್ತೆ ಅಭಿವೃದ್ಧಿಪಡಿಸಬೇಕು. ಗಂಗಾಮತ ಬೀದಿಯಲ್ಲಿ ನಲ್ಲಿ ಗುಂಡಿಗಳನ್ನು ಮುಚ್ಚಿಸಬೇಕು. ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕು. ಸಿಡಿ ಬಂಡಿ ಎಳೆಯುವ ಸ್ಥಳಗಳಲ್ಲಿ ಸ್ಥಳೀಯ ಪೊಲೀಸರನ್ನು ನಿಯೋಜಿಸಬೇಕು ಎಂದು ಸಲಹೆ ನೀಡಿದರು.
ಪ್ರತಿ ಹಬ್ಬದಲ್ಲೂ ಅಶೋಕನಗರ ಬಡಾವಣೆಯಲ್ಲಿ ಕುಡಿಯುವ ನೀರು ಪೂರೈಕೆ, ಸ್ವಚ್ಛತೆಗೆ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಪುರಸಭಾ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಡಾವಣೆ ಮುಖಂಡರಾದ ಕೃಷ್ಣಮೂರ್ತಿ, ರಮೇಶ್ ಆರೋಪಿಸಿದರು.
ಸಿದ್ಧಾರ್ಥನಗರ ಬಡಾವಣೆಯಲ್ಲೂ ಸಹ ಕುಡಿಯುವ ನೀರಿನ ಸಮಸ್ಯೆ ಜತೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ತುಕ್ಕು ಹಿಡಿಯುತ್ತಿದ್ದರೂ ದುರಸ್ತಿ ಮಾಡಿಲ್ಲ. ಘಟಕ ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ವಾಹನಗಳ ನಿಲುಗಡೆಯಿಂದ ತೊಂದರೆಯಾಗುತ್ತಿದೆ ಎಂದು ಮುಖಂಡರಾದ ಮರಿಸ್ವಾಮಿ ದೂರಿದರು.
ನಾಗರಿಕ ಎಲ್ಲ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಲಾಗುವುದು. ನಿಗದಿತ ಸಮಯಕ್ಕೆ ಘಟಕಗಳು ಹಾಗೂ ಸಿಡಿಬಂಡಿ ಮೆರವಣಿಗೆ ನಡೆಸಲು ಹಬ್ಬ ಆಚರಣೆಗೆ ಪ್ರತಿ ಕೋಮಿನ ಮುಖಂಡರು ಜವಾಬ್ದಾರಿ ವಹಿಸಬೇಕು. ಹಬ್ಬವನ್ನು ಶಾಂತಿ ಸುವ್ಯವಸ್ಥಿತವಾಗಿ ನಡೆಯಲು ಎಲ್ಲರೂ ಸಹಕರಿಸುವಂತೆ ಉಪ ವಿಭಾಗಾಧಿಕಾರಿ ಶಿವಮೂರ್ತಿ ಕೋರಿದರು.
ತಹಸೀಲ್ದಾರ್ ಡಾ.ಲೋಕೇಶ್, ತಾಪಂ ಇಒ ಶ್ರೀನಿವಾಸ್, ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐ ಶ್ರೀಧರ್, ಬಸವರಾಜು, ಪುರಸಭೆ ಮುಖ್ಯಾಧಿಕಾರಿ ನಾಗರತ್ನಾ, ಬಿಇಒ ಉಮಾ, ವಿವಿಧ ಕೋಮಿನ ಮುಖಂಡು ಹಾಗೂ ಗಡಿ ಯಜಮಾನರು ಇದ್ದರು.