ಯತ್ತಂಬಾಡಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಗ್ಗಿ ಸಂಭ್ರಮ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಹೇಮಂತ್, ಯರಾಮು ವಿಶ್ವನಾಥ, ಭಾಗ್ಯಮ್ಮ, ರಮೇಶ್, ಸೋಮಶೇಖರ್, ಶಿವಲಿಂಗೇಗೌಡ ಇದ್ದರು. 
ಮಂಡ್ಯ

ಯತ್ತಂಬಾಡಿ ಶಾಲೆ ಮಾದರಿಯಾಗಿಸುವ ಗುರಿ

ಲೋಕೇಶ್ ಮನು. ಡಿ
ಹಲಗೂರು: ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವುಗಳು ಮುಂದಾಗಿದ್ದೇವೆ. ಯತ್ತಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ರಾಜ್ಯದಲ್ಲೇ ಮಾದರಿ ಶಾಲೆಯನ್ನಾಗಿ ಮಾಡುವ ಗುರಿ ಇದೆ ಎಂದು ಬೆಂಗಳೂರಿನ ಉದ್ಯಮಿ ಹೇಮಂತ್ ತಿಳಿಸಿದರು.
ಸಮೀಪದ ಯತ್ತಂಬಾಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಸಂಕ್ರಾಂತಿ ಸುಗ್ಗಿ ಸಂಭ್ರಮ ಎಂಬ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಈಗ ಸರ್ಕಾರಿ ಶಾಲೆ ಎಂದರೆ ಅದು ಸರ್ಕಾರಕ್ಕೆ ಸೇರಿದ ಶಾಲೆ, ಸರ್ಕಾರ ಎಂದರೆ ಕಾಂಗ್ರೆಸ್ ಸರ್ಕಾರ, ಬಿಜೆಪಿ ಸರ್ಕಾರ, ಜೆಡಿಎಸ್ ಸರ್ಕಾರ ಎಂಬ ಭಾವನೆ ಇದೆ. ಇದನ್ನೆಲ್ಲ ಹೊರತುಪಡಿಸಿ ಈ ಶಾಲೆ ನಮ್ಮ ಶಾಲೆ, ನಮ್ಮೆಲ್ಲರ ಶಾಲೆ ಎಂಬ ಗೌರವ ನಮ್ಮಲ್ಲಿ ಬೆಳೆಯಬೇಕು. ಈ ಶಾಲೆ ಅತ್ಯುನ್ನತ ಮಟ್ಟಕ್ಕೆ ತಲುಪಬೇಕಾದರೆ ಏನೇನು ಅಗತ್ಯವಿದೆ ಅದನ್ನೆಲ್ಲ ನಾವು ಪೂರೈಸಲು ಸಿದ್ಧರಿದ್ದೇವೆ. ನಮ್ಮ ಸಂಪಾದನೆಯ ಒಂದು ಭಾಗವನ್ನು ಮೀಸಲಿಟ್ಟು ಈ ಶಾಲೆಯನ್ನು ಜಿಲ್ಲೆಯಲ್ಲಿ ಅತ್ಯುತ್ತಮ ಶಾಲೆಯಾಗಿ ಮಾಡಲು ಸ್ನೇಹಿತರೊಂದಿಗೆ ಶ್ರಮಿಸಲಾಗುವುದು ಎಂದರು.
ಮತ್ತೋರ್ವ ಉದ್ದಮಿ ಜಯರಾಮು ಮಾತನಾಡಿ, ಹಳ್ಳಿಯಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ. ಅಂತಹ ಸಂದರ್ಭದಲ್ಲಿ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮನೆ ತುಂಬಿಸಿಕೊಳ್ಳುವ ಸುಗ್ಗಿ ಹಬ್ಬಸಂಕ್ರಾಂತಿ ಹಬ್ಬದ ವಾತಾವರಣ ಸೃಷ್ಟಿಸಿ ನಮ್ಮ ಕಣ್ಮನ ತುಂಬಿಸಿದ ಇಲ್ಲಿಯ ಶಿಕ್ಷಕ ವೃಂದ ಮತ್ತು ಮಕ್ಕಳಿಗೆ ಕಾರ್ಯ ಶ್ಲಾಘನೀಯ ಎಂದರು.
ಶಾಲೆಯ ಮೈದಾನದಲ್ಲಿ ನಿರ್ಮಿಸಲ್ಪಟ್ಟ ಧಾನ್ಯಗಳ ಒಕ್ಕಣೆಯ ಕಣ, ಹೂವಿನಿಂದ ಅಲಂಕರಿಸಿದ ಧಾನ್ಯಗಳ ರಾಶಿ, ರಟ್ಟಿನಲ್ಲಿ ನಿರ್ಮಿಸಲಾದ ಹಳ್ಳಿಮನೆ, ನೀರು ಸೇದುವ ಬಾವಿ, ಎತ್ತಿನ ಬಂಡಿ, ಒಣ ಹುಲ್ಲಿನ ಮೆದೆ, ಮೊರಗಳಲ್ಲಿ ತುಂಬಿಟ್ಟ ಅವರೆಕಾಯಿ, ಕಡಲೆಕಾಯಿ, ಸಿಹಿ ಗೆಣಸು, ಹೆಂಗಸು ಮತ್ತು ಗಂಡಸಿನ ಚಿತ್ರವನ್ನು ಬಿಡಿಸಿರುವ ಮಡಿಕೆಗಳು, ಪಕ್ಷಿಗಳಿಂದ ಧಾನ್ಯವನ್ನು ಸಂರಕ್ಷಿಸಲು ಹೊಲಗಳಲ್ಲಿರಿಸುವ ಬೆದರು ಬೊಂಬೆಗಳು,ಎಳ್ಳು ಬೆಲ್ಲ ಕೊಬ್ಬರಿ ಮಿಶ್ರಣ, ಪೂಜಾ ಸಾಮಗ್ರಿಗಳು ಒಟ್ಟಾರೆ ಶಾಲೆಯ ಆವರಣ ಹಳ್ಳಿಯ ಸೊಬಗನ್ನು ಪ್ರತಿಬಿಂಬಿಸುತ್ತಿತ್ತು.
ಇದೇ ಸಂದರ್ಭದಲ್ಲಿ ಯತ್ತಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಸಿಆರ್‌ಪಿ ಶಿಕ್ಷಕ ರೇವಣ್ಣ ಹಾಗೂ ಬೆಂಗಳೂರಿನ ಉದ್ಯಮಿಗಳಾದ ಶಿವಕುಮಾರ್, ವೀರಣ್ಣ, ಹೇಮಂತ್ ಮತ್ತು ಪುಟ್ಟಸ್ವಾಮಾಚಾರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯಶಿಕ್ಷಕ ವಿಶ್ವನಾಥ ಸೇರದಂತೆ ಶಿಕ್ಷಕ ವೃಂದ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಸೋಮಶೇಖರ್, ಶಿವಲಿಂಗೇಗೌಡ, ಕೆಂಚೇಗೌಡ, ಕೆಂಪೇಗೌಡ, ಕೆಂಪರಾಜು ಸೇರಿದಂತೆ ಇತರರು ಇದ್ದರು.