ಮದ್ದೂರು ತಾಲೂಕಿನ ಕೆ.ಬೆಳ್ಳೂರು ಗ್ರಾಮದ ಪ್ರವಾಸಿ ಮಂದಿರದಲ್ಲಿ ಕಬ್ಬು ಬೆಳೆಯಲ್ಲಿ ಮಣ್ಣಿನ ಆರೋಗ್ಯ ಮತ್ತು ಸಮಗ್ರ ನೀರಿನ ಕ್ರಮಗಳ ಕುರಿತ ಕಿಸಾನ್ ಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿ.ಎಸ್.ಅಶೋಕ್, ಡಾ.ಆನಂದ, ಎಚ್.ಜಿ.ಪ್ರತಿಭಾ, ಎಂ.ಶಿವಪ್ಪ, ಕೆ.ಎನ್.ಕುರಣ, ಎಸ್.ಗವಾಸ್ಕರ್ ಇದ್ದರು.
ಮದ್ದೂರು: ಕಬ್ಬು ಬೆಳೆಗಾರರು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಬೆಳೆ ಬೆಳೆದರೆ ಉತ್ತಮ ಫಸಲು ತೆಗೆದು ಅಧಿಕ ಲಾಭ ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ತಿಳಿಸಿದರು.
ತಾಲೂಕಿನ ಕೆ.ಬೆಳ್ಳೂರು ಗ್ರಾಮದ ಪ್ರವಾಸಿ ಮಂದಿರದಲ್ಲಿ ಕೃಷಿ ಇಲಾಖೆ, ಆತ್ಮ ಯೋಜನೆಯಡಿ ವಲಯ ಕೃಷಿ ಸಂಶೋಧನಾ ಕೇಂದ್ರ ವಿ.ಸಿ. ಫಾರ್ಮ್ ಮಂಡ್ಯ ಹಾಗೂ ಭಾರತಿ ನಗರದ ಚಾಮುಂಡೇಶ್ವರಿ ಷುಗರ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಬ್ಬು ಬೆಳೆಯಲ್ಲಿ ಮಣ್ಣಿನ ಆರೋಗ್ಯ ಮತ್ತು ಸಮಗ್ರ ನೀರಿನ ಕ್ರಮಗಳ ಕುರಿತ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಣ್ಣಿನ ಪರೀಕ್ಷೆ, ಮಣ್ಣಿನ ಪಿಎಚ್ ಮಟ್ಟ, ಪೋಷಕಾಂಶಗಳ ಅಂಶ ಮತ್ತು ಸಾವಯವ ಪದಾರ್ಥಗಳನ್ನು ಪರೀಕ್ಷಿಸಬೇಕು. ಕಬ್ಬಿನ ಬೆಳೆಗೆ ಸಾವಯವ ಗೊಬ್ಬರ ಬಳಕೆಯು ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಹಸಿರು ಗೊಬ್ಬರ ಬೆಳೆಗಳು ಮಣ್ಣಿನ ಸವೆತವನ್ನು ತಡೆಯುತ್ತವೆ ಮತ್ತು ಪೋಷಕಾಂಶಗಳನ್ನು ಒದಗಿಸುತ್ತವೆ ಎಂದರು.
ಬೆಳೆ ತಿರುಗುವಿಕೆಯು ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತದೆ ಮತ್ತು ಕೀಟಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕಬ್ಬಿನ ಬೆಳೆಗೆ ನೀರು ನಿರ್ವಹಣೆಯು ಬಹಳ ಮುಖ್ಯ. ನೀರು ನಿಲ್ಲದಂತೆ ನೋಡಿಕೊಂಡು ಮಣ್ಣಿನ ಆಚ್ಛಾದನೆಯು ಮಣ್ಣಿನ ತೇವಾಂಶ ಕಾಪಾಡುತ್ತದೆ ಮತ್ತು ಕಳೆ ನಿಯಂತ್ರಿಸುತ್ತದೆ ಎಂದರು.
ಜಿಲ್ಲೆಗೆ ಸಿಒ 86032 ತಳಿಯು ಕಡಿಮೆ ಮಳೆಯ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ ಮತ್ತು ಹೆಚ್ಚಿನ ಇಳುವರಿ ನೀಡುತ್ತದೆ. ಸಿಒ 671 ತಳಿಯು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಸಿಒ 0118(ನಾಯನ್) ತಳಿಯು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಚೆನ್ನಾಗಿ ಬೆಳೆಯುತ್ತದೆ ಮತ್ತು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಸಿಒವಿಸಿ 18061 ಈ ತಳಿಯು ಜನವರಿಯಲ್ಲಿ ನಾಟಿ ಮಾಡಲು ಸೂಕ್ತವಾಗಿದೆ. ವಿಸಿಎಫ್ 0517 ಈ ತಳಿಯು ಸೆಪ್ಟೆಂಬರ್ ಮತ್ತು ನವೆಂಬರ್‌ನಲ್ಲಿ ನಾಟಿ ಮಾಡಲು ಸೂಕ್ತವಾಗಿದೆ ಮತ್ತು ಹೆಚ್ಚಿನ ಸಕ್ಕರೆ ನೀಡುತ್ತದೆ. ಮಂಡ್ಯ ಮೂಲದ ಕಬ್ಬಿನ ತಳಿಯು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 70-100 ಟನ್ ಇಳುವರಿ ನೀಡುತ್ತದೆ ಮತ್ತು ಕಡಿಮೆ ನೀರಿನ ಬಳಕೆ ಹೊಂದಿದೆ ಎಂದರು.
ಡಾ.ಆನಂದ ಸಹಪ್ರದೇಪಕರು ಮಣ್ಣು ಆರೋಗ್ಯ ವಿಸಿ ಫಾರ್ಮ್ ಮಂಡ್ಯ, ಎಚ್.ಜಿ.ಪ್ರತಿಭಾ ಎಚ್‌ಜಿ ಸಹಾಯಕ ಕೃಷಿ ನಿರ್ದೇಶಕಿ, ಎಂ.ಶಿವಪ್ಪ, ವ್ಯವಸ್ಥಾಪಕರು ಕಬ್ಬು ವಿಭಾಗ ಚಾಮುಂಡಿ ಶುಗರ್ ಭಾರತಿ ನಗರ, ಕೆ.ಎನ್.ಕರುಣ ಕೃಷಿ ಅಧಿಕಾರಿ, ಎಸ್.ಗವಾಸ್ಕರ್ ತಾಲೂಕು ತಾಂತ್ರಿಕ ವ್ಯವಸ್ಥಾಪಕರು ಕೃಷಿ ಇಲಾಖೆ ಇತರರಿದ್ದರು.