ಮದ್ದೂರು ತಾಲೂಕಿನ ಸೋಮನಹಳ್ಳಿಯ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ಶಾಸಕ ಕೆ.ಎಂ.ಉದಯ್ ವಿತರಿಸಿದರು. ಧನಂಜಯ, ನಾಗರಾಜು, ಆಶಾ, ಪ್ರೀತಂ, ರಾಜೇಂದ್ರ, ಶಂಕರ್ ಇದ್ದರು. 
ಮಂಡ್ಯ

ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಲೋಕೇಶ್ ಮನು. ಡಿ
ಮದ್ದೂರು: ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನಿರಂತರವಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಲವು ರೀತಿಯ ಸಹಕಾರ ನೀಡುತ್ತಾ ಬರುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಸೋಮನಹಳ್ಳಿಯ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿ ಶನಿವಾರ ವಿತರಿಸಿ ಮಾತನಾಡಿದರು.

ಕ್ಷೇತ್ರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶುಲ್ಕವನ್ನು ಟ್ರಸ್ಟ್ ವತಿಯಿಂದ ಭರಿಸಲಾಗುತ್ತಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಟ್ರಸ್ಟ್‌ನಿಂದ ಉಚಿತ ನೋಟ್‌ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ನೀಡುತ್ತಾ ಬರಲಾಗುತ್ತಿದೆ. ಅಗತ್ಯವಿರುವೆಡೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸರ್ಕಾರ ಸವಲತ್ತುಗಳ ಜತೆಗೆ ಟ್ರಸ್ಟ್ ವತಿಯಿಂದಲೂ ಅಗತ್ಯ ಸಹಕಾರವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದರು.
ವಿದ್ಯೆ ಮನಸ್ಸುಗಳನ್ನು ಬೆಳಗಿಸಿ, ಬುದ್ಧಿ ಶಕ್ತಿಯನ್ನು ಹೆಚ್ಚಿಸುವ ಜತೆಗೆ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ಪ್ರಪಂಚದಲ್ಲಿ ವಿದ್ಯೆಗೆ ಹೆಚ್ಚಿನ ಮಹತ್ವವಿದೆ. ಇದನ್ನರಿತು ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಬಿಇಒ ಧನಂಜಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು, ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ಕೆ.ಎಂ.ರವಿ, ಪ್ರಾಂಶುಪಾಲೆ ಆಶಾ, ಗ್ರಾಪಂ ಸದಸ್ಯರಾದ ಪ್ರೀತಂ, ರಾಜೇಂದ್ರ ಮುಖಂಡರಾದ ಕುಮಾರ್, ಶಂಕರ್ ಸೇರಿದಂತೆ ಇತರರಿದ್ದರು.