ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ 4 ದಿನಗಳ ಕಾಲ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಧನಂಜಯ, ನಾಗೇಶ್, ರವಿ, ಅನಂತೇಗೌಡ, ಆನಂದ್, ಮಹೇಶ್, ನಾಗೇಶ್ ಇದ್ದರು. 
ಮಂಡ್ಯ

ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ

ಲೋಕೇಶ್ ಮನು. ಡಿ
ಮದ್ದೂರು: ಶೈಕ್ಷಣಿಕ ಪ್ರವಾಸವು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಾಚೆಗಿನ ಜ್ಞಾನ, ಅನುಭವ ಮತ್ತು ಕೌಶಲಗಳನ್ನು ನೀಡುವ ಒಂದು ಮಹತ್ವದ ಚಟುವಟಿಕೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ 4 ದಿನಗಳ ಕಾಲ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ತಾಲೂಕಿನ ಕದಲೂರಿನಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಸಂಸ್ಕೃತಿ, ಇತಿಹಾಸ ಮತ್ತು ವಿಜ್ಞಾನವನ್ನು ಪ್ರತ್ಯಕ್ಷವಾಗಿ ಅರಿಯಲು, ತಂಡವಾಗಿ ಕೆಲಸ ಮಾಡಲು, ಸಮಸ್ಯೆ ಪರಿಹಾರ ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಶೈಕ್ಷಣಿಕ ಪ್ರವಾಸ ಸಹಾಯ ಮಾಡುತ್ತದೆ. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇದು ಅವಿಭಾಜ್ಯ ಅಂಗವಾಗಿದೆ ಎಂದರು.
ಸರ್ಕಾರದಿಂದ 2025-26 ನೇ ಸಾಲಿನ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ 8, 9, ಮತ್ತು 10 ನೇ ತರಗತಿಯ ಪ್ರತಿಭಾವಂತ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 4 ದಿನಗಳ ಕಾಲ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು.
ಜ.10 ರಿಂದ 14 ರವರೆಗೆ ಚಿತ್ರದುರ್ಗ, ಟಿ.ಬಿ. ಡ್ಯಾಂ, ಹಂಪಿ, ಆಲಮಟ್ಟಿ, ಐಹೊಳೆ ಪಟ್ಟದಕಲ್ಲು, ಬಾದಾಮಿ, ಗೋಕರ್ಣ, ಮುರುಡೇಶ್ವರ, ಕೊಲ್ಲೂರು, ಉಡುಪಿ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ ಎಂದರು.
ಬಿಇಒ ಧನಂಜಯ, ಬಿಆರ್‌ಸಿ ನಾಗೇಶ್, ಇಸಿಒ ರಮೇಶ್, ರವಿ, ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಂತೇಗೌಡ ಹಾಗೂ ಆನಂದ್, ಮಹೇಶ್, ಶಿವಲಿಂಗಯ್ಯ, ರುಕ್ಮಾಂಗದ ಇದ್ದರು.