ಕಿಕ್ಕೇರಿ ಹೋಬಳಿಯ ಆನೆಗೂಳ ಗ್ರಾಮದಲ್ಲಿರುವ ಶಿಥಿಲಾವಸ್ಥೆಯ ಬಸ್‌ನಿಲ್ದಾಣ. 
ಮಂಡ್ಯ

ಅಪಾಕ್ಕೆ ಆಹ್ವಾನಿಸುತ್ತಿದೆ ಬಸ್ ತಂಗುದಾಣ

ಲೋಕೇಶ್ ಮನು. ಡಿ
ಕಿಕ್ಕೇರಿ: ಹೋಬಳಿಯ ಗಡಿಭಾಗವಾದ ಆನೆಗೂಳ ಗ್ರಾಮದಲ್ಲಿನ ಬಸ್‌ತಂಗುದಾಣ ಶಿಥಿಲಾವಸ್ಥೆ ತಲುಪಿದ್ದು, ಅಪಾಯಕ್ಕೆ ಆಹ್ವಾನಿಸುವಂತಿದೆ.
ದುಸ್ಥಿತಿಯಲ್ಲಿರುವ ತಂಗುದಾಣಕ್ಕೆ ಕಾಯಕಲ್ಪವಿಲ್ಲದೆ ಪ್ರಯಾಣಿಕರು ಭಯದಲ್ಲಿ ಇಲ್ಲಿನ ಆಸನದಲ್ಲಿ ಕುಳಿತುಕೊಳ್ಳಬೇಕಿದೆ. ಬಸ್‌ನಿಲ್ದಾಣದ ಬಳಿ ನಿಲ್ಲಬೇಕಿದೆ.
ಗ್ರಾಮ ಹತ್ತಾರು ಗ್ರಾಮಗಳ ಸಂಪರ್ಕಿಸುವ ಕೇಂದ್ರವಾಗಿದೆ. ಚಿಕ್ಕತರಹಳ್ಳಿ, ದೊಡ್ಡತರಹಳ್ಳಿ, ಬೋಳಮಾರನಹಳ್ಳಿ, ಕಡಹೆಮ್ಮಿಗೆ, ಅಂಚೆಬೀರನಹಳ್ಳಿ, ಮಂಡಲೀಕನಹಳ್ಳಿ ಮತ್ತಿತರ ಗ್ರಾಮದವರು ಪರಸ್ಥಳಕ್ಕೆ ಸಾಗಲು ಈ ಗ್ರಾಮದಲ್ಲಿನ ಬಸ್‌ತಂಗುದಾಣಕ್ಕೆ ಬರಬೇಕಿದೆ.
ಛಾವಣಿಯ ಕಬ್ಬಿಣದ ಸರಳು ಕಿತ್ತು ಬಂದು ಅಲ್ಲಿನ ಗಾರೆ ಚುರುಕಿ ಉದುರುತ್ತಿದೆ. ಚುರುಕಿಯಲ್ಲಿನ ಕಬ್ಬಿಣದ ಸರಳು ತುಕ್ಕು ಹಿಡಿದು ಹೊರಚಾಚಿವೆ. ಕೂರುವ ಆಸನಗಳು ಕಿತ್ತುಬಂದಿದ್ದು ಕೂರುವುದರಿಲಿ, ನೋಡಲು ಆಗದಷ್ಟು ಹಾಳಾಗಿವೆ. ಗಾಳಿ, ಮಳೆ ಬಂದರೆ ನಿಲ್ದಾಣದಲ್ಲಿ ನಿಲ್ಲಲು ಕೂಡ ಆಗದಂತಹ ಸ್ಥಿತಿ ಇದೆ. ನಿರ್ವಹಣೆ ಕಾಣದ ನಿಲ್ದಾಣದ ತುಂಬಾ ಕಸಕಡ್ಡಿ, ಬೀಡಿ, ಸಿಗರೇಟು, ಪ್ಲಾಸ್ಟಿಕ್ ಕವರ್‌ನಂತಹ ಹಲವು ಅನುಪಯುಕ್ತ ವಸ್ತುಗಳು ಸಂಗ್ರಹವಾಗಿವೆ. ದುರ್ವಾಸನೆ ಸಹಿಸಿಕೊಂಡು ಬಸ್‌ಗಳನ್ನು ಕಾಯುವ ಅನಿವಾರ್ಯತೆ ಪ್ರಯಾಣಿಕರಿಗೆ ಎದುರಾಗಿದೆ.
ರಾಜ್ಯ ಹೆದ್ದಾರಿಯಲ್ಲಿರುವ ಈ ಗ್ರಾಮದಲ್ಲಿ 2 ಬಸ್ ತಂಗುದಾಣಗಳಿವೆ. ಚನ್ನರಾಯಪಟ್ಟಣ ಮಾರ್ಗದಲ್ಲಿನ ಬಸ್ ತಂಗುದಾಣ ಸುಸ್ಥಿತಿಯಲ್ಲಿದೆ. ಆದರೆ ತರಕಾರಿ ಮತ್ತಿತರ ಅಂಗಡಿಗಳು ಜಾಗವನ್ನು ಆಕ್ರಮಿಸಿಕೊಳ್ಳುವುದರಿಂದ ಪ್ರಯಾಣಿಕರು ಕೂರಲು ತೊಂದರೆ ಉಂಟಾಗಿದೆ. ಮತ್ತೊಂದು ಕೆ.ಆರ್.ಪೇಟೆ ಮಾರ್ಗದ ಕಡೆ ಇರುವ ತಂಗುದಾಣ ಬೀಳುವ ಸ್ಥಿತಿಯಲ್ಲಿದೆ. ತ್ವರಿತವಾಗಿ ಬಸ್ ತಂಗುದಾಣ ದುರಸ್ತಿ ಮಾಡಿದರೆ ಶಾಲಾ ಕಾಲೇಜು ಮಕ್ಕಳು, ಪ್ರಯಾಣಿಕರು, ಹಿರಿಯರು ಬಸ್ ಬರುವ ವರೆಗೆ ಈ ನಿಲ್ದಾಣದಲ್ಲಿ ವಿರಮಿಸಬಹುದು.