ಬಾಬುರಾಯನ ಕೊಪ್ಪಲು ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಚಿಣ್ಣರ ಚಿಲಿಪಿಲಿ ಬಾಲಮೇಳ ಕಾರ್ಯಕ್ರಮದಲ್ಲಿ ಪುಟ್ಟಮಕ್ಕಳು ಮಹನೀಯರ ವೇಷ ಭೂಷಣ ಧರಿಸಿ ಕಣ್ಮನ ಸೆಳೆದರು. 
ಮಂಡ್ಯ

ಮಕ್ಕಳ ಬೆಳವಣಿಗೆಗೆ ಚಿಣ್ಣರ ಚಿಲಿಪಿಲಿ ಪೂರಕ

ಲೋಕೇಶ್ ಮನು. ಡಿ
ಶ್ರೀರಂಗಪಟ್ಟಣ: ಚಿಣ್ಣರ ಚಿಲಿಪಿಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಹಾಗೂ ಸಂತೋಷದಿಂದ ಕೂಡಿದ ಕಾರ್ಯಕ್ರಮವಾಗಿದ್ದು, ಇಂತಹ ಪುಟ್ಟ ಮಕ್ಕಳ ಬಾಲ ಪ್ರತಿಭೆಯನ್ನು ಗುರುತಿಸಲು ಬಾಲಮೇಳ ಕಾರ್ಯಕ್ರಮ ಸೂಕ್ತ ವೇದಿಕೆ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಕಲೇಶ್ವರ್ ಅಭಿಪ್ರಾಯಪಟ್ಟರು.
ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಜೀಮ ಪ್ರೇಮ್‌ಜೀ ಫೌಂಡೇಶನ್ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಆಯೋಜಿಸಿದ್ದ ಚಿಣ್ಣರ ಚಿಲಿಪಿಲಿ ಬಾಲಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಲಕರು ಖಾಸಗಿ ಶಾಲೆಗೆ ಮಾರು ಹೋಗದೆ ಸ್ಥಳೀಯವಾಗಿರುವ ಅಂಗನವಾಡಿ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಸೇರಿಸಬೇಕು ಹಾಗೂ ಅಂಗನವಾಡಿ ಕೇಂದ್ರದಲ್ಲಿ ಸಿಗುವ ಸೇವಾ ಸೌಲಭ್ಯ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಟಿಎಪಿಸಿಎಂಎಸ್ ಸದಸ್ಯ ಸಂದೇಶ್ ಮಾತನಾಡಿ, ಮಕ್ಕಳನ್ನು ಶಿಸ್ತಿನಿಂದ ದಿನ ಅಂಗನವಾಡಿಗೆ ತಪ್ಪದೆ ಕಳುಹಿಸಬೇಕು. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು. ಹಾಗೆಯೇ ಮಕ್ಕಳಿಗೆ ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಬಾರದು. ಮೊದಲು ಸಂಪೂರ್ಣ ಶಿಕ್ಷಣ ಕೊಡಿಸಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಮಾತನಾಡಿ, ಪಾಲಕರು ಮಕ್ಕಳ ಆರೋಗ್ಯ ಕಡೆ ಗಮನ ಹರಿಸಬೇಕು. ಮಕ್ಕಳ ಎತ್ತರ, ವಯಸ್ಸಿಗೆ ತಕ್ಕಂತೆ ತೂಕ ಇರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಆರ್‌ಬಿಎಸ್‌ಕೆ ವೈದ್ಯರ ತಂಡ ಮಕ್ಕಳ ಆರೋಗ್ಯ ತಪಾಸಣೆಗೆ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದಾಗ ಮಕ್ಕಳನ್ನು ಕರೆ ತಂದು ತಮ್ಮ ಮಕ್ಕಳ ದೈಹಿಕ ಮತ್ತು ಮಾನಸಿಕ, ಹುಟ್ಟಿನಿಂದ ಇರುವ ನ್ಯೂನತೆ ಬಗ್ಗೆ ಮಾಹಿತಿ ಯನ್ನು ವೈದ್ಯರೊಂದಿಗೆ ಹಂಚಿಕೊಂಡು ಸೂಕ್ತ ಸಲಹೆ ಹಾಗೂ ಚಿಕಿತ್ಸೆ ಪಡೆಯಬೇಕು. ಮಕ್ಕಳಿಗೆ ಕರಿದ ತಿಂಡಿ, ತಿನಿಸು ಹಾಗೂ ಫಾಸ್ಟ್‌ಫುಡ್, ಬೇಕರಿ ಪದಾರ್ಥ ತಿನ್ನಿಸಬಾರದು ಇದರಿಂದ ಮಕ್ಕಳ ದೈಹಿಕ,ಮಾನಸಿಕ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಪುಟ್ಟಮಕ್ಕಳು ದೇಶದ ಮಹಾನ್ ನಾಯಕರ ಹಾಗೂ ನಾಯಕಿಯರ ವೇಷ ಭೂಷಣ ಧರಿಸಿ ಕಣ್ಮನ ಸೆಳೆದರು. ಇದೇ ವೇಳೆ ಪಾಲಕರಿಗಾಗಿ ಆಯೋಜಿಸಿದ್ದ ಲೆಮನಿನ್ ಸ್ಪೂನ್, ರಂಗೋಲಿ ಸ್ಪರ್ಧೆ, ಮ್ಯೂಸಿಕಲ್ ಚೇರ್, ಡ್ರಾಯಿಂಗ್ ಮುಂತಾದ ಕ್ರೀಡಾ ಚಟುವಟಿಕೆಗೆ ಗ್ರಾಪಂ ಅಧ್ಯಕ್ಷೆ ರೂಪ ಪ್ರಭಾಕರ್ ಚಾಲನೆ ನೀಡಿದರು.
ಗ್ರಾಪಂ ಸದಸ್ಯೆ ಉಷಾ ಎಂ.ಕುಮಾರಸ್ವಾಮಿ, ಮುಖಂಡರಾದ ತಿಲಕ ಕುಮಾರ್, ಸತ್ಯನಾರಾಯಣ, ಸಾಗರ, ಪಿಡಿಒ ಗಂಗಾಧರ್, ಅಜೀಮ್ ಪ್ರೇಮ್‌ಜೀ ಫೌಂಡೇಶನ್ ಸಂಯೋಜಕಿ ಮಾನಸಾ, ಅಂಗನವಾಡಿ ಮೇಲ್ವಿಚಾರಕಿ ಎಲ್.ಆಶಾ, ಅಂಗನವಾಡಿ ಕಾರ್ಯಕರ್ತೆ ಅನಂತಲಕ್ಷ್ಮೀ, ಪದ್ಮಾ, ಶಾರದಾ, ನಂದಿನಿ, ಧನಲಕ್ಷ್ಮೀ, ಆಶಾ ಕಾರ್ಯಕರ್ತೆ ರೇಖಾ, ಲತಾ, ಪ್ರೇಮಾ ಹಾಗೂ ಸಾರ್ವಜನಿಕರು ಇದ್ದರು.