ಮದ್ದೂರು:ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ಆಯೋಜಿಸಿದ್ದ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಕಾರ್ಯಕ್ರಮಕ್ಕೆ ಸಂಸ್ಥೆಯ ಯೋಜನಾಧಿಕಾರಿ ಹಾಲಪ್ಪ ಚಾಲನೆ ನೀಡಿದರು. ವಸಂತಮ್ಮ, ತೇಜಾವತಿ ಇದ್ದರು.
ಮದ್ದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಹಿಳೆಯರ ಸಬಲೀಕರಣಕ್ಕೆ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ಹತ್ತು ಹಲವು ಸೌಲಭ್ಯ ಕಲ್ಪಿಸಿ ಸ್ವಉದ್ಯೋಗಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಸಂಸ್ಥೆಯ ಯೋಜನಾಧಿಕಾರಿ ಹಾಲಪ್ಪ ತಿಳಿಸಿದರು.
ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜ್ಞಾನವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜತೆಗೆ ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡಲು ಸ್ವಉದ್ಯೋಗಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಪ್ರತಿಯೊಬ್ಬರೂ ತರಬೇತಿ ಮತ್ತು ಸಮುದಾಯದ ಕಾರ್ಯಕ್ರಮದ ಯೋಜನೆಯ ಸದುಪಯೋಗಪಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.
ಸ್ಥಳೀಯ ರೈತರು ಸುಖ ಜೀವನ ನಡೆಸಬೇಕೆಂಬ ಉದ್ದೇಶದಿಂದ ಗ್ರಾಮದಲ್ಲಿರುವ ಕೆರೆ ಕಟ್ಟೆಗಳನ್ನು ಪುನರುಜ್ಜೀವನಗೊಳಿಸಿ ಹೂಳು ತೆಗೆಸುವ ಜತೆಗೆ ಒತ್ತುವರಿ ತೆರವುಗೊಳಿಸಿ ಹೆಚ್ಚು ನೀರು ಸಂಗ್ರಹಣೆ ಮಾಡುವ ಮೂಲಕ ಬೇಸಾಯಕ್ಕೂ ಅನುಕೂಲ ಕಲ್ಪಿಸಿರುವ ಉದಾಹರಣೆಗಳು ತಾಲೂಕಿನಲ್ಲಿ ಸಾಕಷ್ಟಿವೆ ಎಂದರು.
ಟೈಲರಿಂಗ್ ತರಬೇತಿಯಿಂದ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಸಹಕಾರಿಯಾಗಲಿದ್ದು ತರಬೇತಿ ಪಡೆದ ಸದಸ್ಯರು ಪೂರಕವಾಗಿ ಅನುಸರಿಸಬೇಕಾದ ನಿಯಮಗಳು ಹಾಗೂ ಪರಿಕರಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಈ ವೇಳೆ ಒಕ್ಕೂಟದ ಅಧ್ಯಕ್ಷೆ ವಸಂತಮ್ಮ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ತೇಜಾವತಿ ಹಾಗೂ ಮಹಿಳೆಯರು ಇದ್ದರು.