ಕಿಕ್ಕೇರಿ ಸಮೀಪದ ಮಂದಗೆರೆಯ ಸಾರ್ವಜನಿಕ ರಸ್ತೆಗಳು ಡಾಂಬರು ಕಾಣದೆ ಗಿಡಗಂಟಿ ಬೆಳೆದಿರುವುದು.  
ಮಂಡ್ಯ

ಸಮಸ್ಯೆಗಳ ಕಾರುಬಾರಿನ ಮಂದಗೆರೆ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು ಮೂಲ ಸೌಕರ್ಯದ ಕೊರತೆ ಇದೆ
ಕಿಕ್ಕೇರಿ; ಪ್ರಕೃತಿಯ ಮಡಿಲು, ಹೇಮಾವತಿ ನದಿಯ ದಂಡೆಯಲ್ಲಿರುವ ಗ್ರಾಮವಾದ ಮಂದಗೆರೆ ಸುಂದರವಾದರೂ ಹತ್ತಾರು ಸಮಸ್ಯೆಗಳನ್ನು ಹೊತ್ತಿಕೊಂಡು ನಲುಗುತ್ತಿದೆ.
ಗ್ರಾಮವೂ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು ಸ್ಥಳೀಯ ಸಮಸ್ಯೆಗಳಿಗೆ ಪ್ರಥಮ ಆದ್ಯತೆ ನೀಡಬೇಕಿದೆ. ಇಲ್ಲಿನ ಬಹುತೇಕ ರಸ್ತೆಗಳು ಡಾಂಬರು, ಒಳಚರಂಡಿ ವ್ಯವಸ್ಥೆ ಕಾಣದೆ ಗ್ರಾಮಸ್ಥರ, ಸುತ್ತಮುತ್ತಲ ನಾಗರೀಕರ, ರೈತರ ಓಡಾಟಕ್ಕೆ ಕಷ್ಟಕರವೆನಿಸಿದೆ. ಗುಂಡಿ ಬಿದ್ದು ರಸ್ತೆಗಳು ಸಂಪೂರ್ಣ ಹಾಳಾಗಿ ನಡೆದಾಡಲು ಕೂಡ ಹಿಂಸೆ ಪಡುವಂತಿದೆ. ಹಳೆಯ ರಸ್ತೆಗಳು ಒತ್ತುವರಿಯಾಗಿವೆ. ರಸ್ತೆಯ ಪಕ್ಕದಲ್ಲಿ ಗಿಡಗಂಟಿ ದಟ್ಟವಾಗಿ ಬೆಳೆದು ಹಗಲು ವೇಳೆಯೇ ಹಾವು, ಚೇಳುಗಳ ಕಾಟವಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯ, ತಿಪ್ಪೆ ರಾಶಿ ಎಲ್ಲೆಂದರಲ್ಲಿದೆ.
ರೈಲ್ವೆ ಇಲಾಖೆಗೆ ಸೇರಿದ ಸಾಕಷ್ಟು ಜಾಗಗಳು ಗ್ರಾಮದಲ್ಲಿದೆ. ನಿರ್ವಹಣೆ ಕಾಣದೆ ಇಡೀ ಜಾಗದಲ್ಲಿ ಅನೈತಿಕ ಚಟುವಟಿಕೆ, ಮೋಜು, ಮಸ್ತಿ ತಾಣವಾಗಿ ಪರಿಣಮಿಸಿದೆ.
ಈ ಪ್ರದೇಶದ ಸನಿಹದಲ್ಲಿಯೇ ಪ್ರೌಢಶಾಲೆ ಇದ್ದು ಈ ಮಕ್ಕಳ ಓಡಾಟಕ್ಕೆ ದಿಗಿಲು ಮೂಡಿಸುವಂತಿದೆ. ರಾತ್ರಿ ವೇಳೆಯಂತೂ ಈ ಸ್ಥಳದ ಬಳಿ ಯಾರೊಬ್ಬರೂ ಸುಳಿಯಲು ಭಯವಿದ್ದು, ಕಳ್ಳಕಾಕರ ಭಯ ಹೇಳತೀರದಾಗಿದೆ. ಈ ಪ್ರದೇಶದಲ್ಲಿನ ಗಿಡಗಂಟಿ ತ್ವರಿತವಾಗಿ ತೆರವುಗೊಳಿಸಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಇಲಾಖೆ ಕಾಳಜಿವಹಿಸಬೇಕಿದೆ.
ರಾತ್ರಿ ವೇಳೆ ರೈಲುನಿಲ್ದಾಣದಿಂದ ಬರುವ ಪ್ರಯಾಣಿಕರ ಸುರಕ್ಷತೆ ಪೊಲೀಸರ ಬೀಟು ಹೆಚ್ಚಾಗಬೇಕಿದೆ.
ಕಾಟಾಚಾರದ ಬಸ್‌ನಿಲ್ದಾಣ: ಮಂದಗೆರೆ ಗ್ರಾಮದಲ್ಲಿನ ಬಸ್‌ನಿಲ್ದಾಣ ಸಂಪೂರ್ಣ ಹಾಳಾಗಿದೆ. ಸುವ್ಯವಸ್ಥಿತವಾಗಿದ್ದ ನಿಲ್ದಾಣ ನಿರ್ವಹಣೆ ಕಾಣದೆ ಖಾಸಗಿ ವ್ಯಕ್ತಿಗಳ ಗೋದಾಮಿನಂತಾಗಿದೆ. ಬಸ್‌ನಿಲ್ದಾಣದ ಮುಂದೆ ಖಾಸಗಿ ಅಂಗಡಿಯವರು ಸಂಪೂರ್ಣ ಮರೆ ಮಾಡಲಾಗಿದೆ. ಪ್ರಯಾಣಿಕರು ಈ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಆಗದಷ್ಟು ಅದ್ವ್ವಾನವಾಗಿದೆ. ರಸ್ತೆ ಬದಿಯಲ್ಲಿಯೇ ನಿಂತು ಪ್ರಯಾಣಿಕರು ಬಸ್ ಕಾಯುವಂತಹ ಸ್ಥಿತಿ ಇದೆ. ಬಸ್‌ನಿಲ್ದಾಣ ಜೀರ್ಣೋದ್ಧಾರ ಅವಶ್ಯವಿದ್ದು ತ್ವರಿತವಾಗಿ ಆಗಬೇಕಿದೆ.
ದಾಖಲಾತಿ ಕೊರತೆ: ಗ್ರಾಮದಲ್ಲಿ ಸರ್ಕಾರಿ ಪಿಯು ಕಾಲೇಜು ದಾಖಲಾತಿ ಕೊರತೆಯಿಂದ ಮುಚ್ಚಿದ್ದು, ಎಸ್ಸೆಸ್ಸೆಲ್ಸಿನಂತರ ಸುತ್ತಮುತ್ತಲ ಗ್ರಾಮದ ಮಕ್ಕಳು ದೂರದ ಕೆ.ಆರ್. ಪೇಟೆ, ಕಿಕ್ಕೇರಿ, ಹೊಳೆನರಸೀಪುರ, ಚನ್ನರಾಯಪಟ್ಟಣ ಆಶ್ರಯಿಸಬೇಕಿದೆ.
ರೈಲ್ವೆ ಮೇಲು ಸೇತುವೆ ಅವಶ್ಯ: ಚಿಕ್ಕಮಂದಗೆರೆ, ಗದ್ದೆಹೊಸೂರು, ಶ್ರವಣನಹಳ್ಳಿ, ಬೇವಿನಹಳ್ಳಿ, ಮೂಡನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಿಂದ ರೈತರು ಹೇಮಗಿರಿ ಶುಗರ್ಸ್‌ಗೆ ಕಬ್ಬು ಸಾಗಣೆ ಮಾಡಲು ಜತೆಗೆ ಕಿಕ್ಕೇರಿ ಮಾರುಕಟ್ಟೆಗೆ ಎಳನೀರು, ತೆಂಗಿನಕಾಯಿ ಮತ್ತಿತರ ತರಕಾರಿಗಳನ್ನು ಸಾಗಿಸಲು ಮಂದಗೆರೆ ಮಾರ್ಗವಾಗಿಯೇ ಬರಬೇಕಿದೆ. ವಯೋವೃದ್ಧರು, ಹೃದಯ ಸಂಬಂಧಿ ಸಮಸ್ಯೆ ಇರುವವರು ಈ ಮಾರ್ಗವಾಗಿಯೇ ತುರ್ತು ಚಿಕಿತ್ಸೆಗೆ ದೂರದ ನಗರ ಪ್ರದೇಶಗಳಿಗೆ ತೆರಳಬೇಕಿದೆ. ನಿತ್ಯ ಹತ್ತಾರು ರೈಲುಗಳು ಓಡಾಡುವುದರಿಂದ ರೈಲು ಬರುವಾಗ ಸಾಕಷ್ಟು ವೇಳೆ ರೈಲ್ವೆ ಗೇಟ್ ಬಳಿ ಕಾಯಬೇಕಿದೆ. ತುರ್ತು, ರೈತರ ಸರಕು ಸಾಗಣೆ, ನಿತ್ಯ ನಾಗರೀಕರ ಓಡಾಟ, ಆರೋಗ್ಯ ಚಿಕಿತ್ಸೆಗಾಗಿ ವೈಜ್ಞಾನಿಕ ರೀತಿಯಲ್ಲಿ ರೈಲ್ವೆ ಮೇಲು ಸೇತುವೆ ತ್ವರಿತವಾಗಿ ಆಗಬೇಕಿದೆ. ಸಮಸ್ಯೆ ಕುರಿತು ರೈಲ್ವೆ ಇಲಾಖೆಗೆ ಸಾಕಷ್ಟು ಬಾರಿ ಮನವರಿಕೆ ಮಾಡಲಾಗಿದೆ ಎನ್ನುತ್ತಾರೆ ರೈತರು.
ಅಂಗನವಾಡಿ ಮಕ್ಕಳಿಗೆ ಭಯ: ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಹಳೆಯ ಗ್ರಾಮ ಪಂಚಾಯಿತಿ ಕಟ್ಟಡವಿದೆ. ಅನುಪಯುಕ್ತ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಗಿಡಗಂಟಿ ಬೆಳೆದು ಈ ಪ್ರದೇಶದಲ್ಲಿ ವಿಷಜಂತು ಕಾಟ ಹೇರಳವಾಗಿದೆ. ಪುಟಾಣಿ ಮಕ್ಕಳು ಈ ಮಾರ್ಗವಾಗಿಯೇ ಓಡಾಡಬೇಕಿದ್ದು, ಈ ಶಿಥಿಲಾವಸ್ಥೆಯ ಕಟ್ಟಡಗಳು ಕುಸಿಯುವ ಹಂತದಲ್ಲಿವೆ. ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತು ಕಟ್ಟಡ ತೆರವುಗೊಳಿಸಬೇಕಿದೆ. ಇಂತಹ ಪ್ರದೇಶಗಳನ್ನು ಗುರ್ತಿಸಿ ಪರಿಸರ ಶುಚಿತ್ವ, ನೈರ್ಮಲ್ಯತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮುಂದಾಗಬೇಕಿದೆ.