ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯ ಸಂಯೋಜಕ ರಮೇಶ್ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹನುಮೇಗೌಡ, ರತ್ನಮ್ಮ, ಭಾಗ್ಯಲಕ್ಷ್ಮೀ, ಲತಾ ಇದ್ದರು. 
ಮಂಡ್ಯ

ಪರಿಸರ ನಾಶಕ್ಕೆ ಮನುಷ್ಯನೇ ಕಾರಣ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಮೈಸೂರಿನ ಒಡಿಪಿ ಸಂಸ್ಥೆಯ ಸಂಯೋಜಕ ರಮೇಶ್ ಬೇಸರ
ಮದ್ದೂರು: ದೈನಂದಿನ ಜೀವನದಲ್ಲಿ ಮನುಷ್ಯ ತನ್ನ ಅವಶ್ಯಕತೆಗೆ ಅನುಗುಣವಾಗಿ ಪರಿಸರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ. ಪರಿಸರ ನಾಶಕ್ಕೆ ಮನುಷ್ಯನೇ ಕಾರಣ ಎಂದು ಮೈಸೂರಿನ ಒಡಿಪಿ ಸಂಸ್ಥೆಯ ಸಂಯೋಜಕ ರಮೇಶ್ ಬೇಸರ ವ್ಯಕ್ತಪಡಿಸಿದರು.
ಪರಿಸರ ದಿನಾಚರಣೆ ಅಂಗವಾಗಿ ನಗರದ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಮೈಸೂರಿನ ಒಡಿಪಿ ಸಂಸ್ಥೆ, ರೈತ ಉತ್ಪಾದಕ ಸಂಸ್ಥೆ ಸಹಕಾರದಲ್ಲಿ ರೈತರಿಗೆ ಗಿಡಗಳನ್ನು ವಿತರಿಸಿ ಮಾತನಾಡಿದರು.
ಕಾಡನ್ನು ನಗರೀಕರಣವಾಗಿಸುತ್ತಿರುವ ಇಂದಿನ ಜನಸಾಮಾನ್ಯರು ತಮ್ಮ ಅವಶ್ಯಕತೆಗಿಂತಲೂ ಹೆಚ್ಚಿನ ಭೂಪ್ರದೇಶವನ್ನು ವಸತಿ, ವಾಣಿಜ್ಯ, ಕೈಗಾರಿಕೆ ಇನ್ನಿತರ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಜತೆಗೆ ಪ್ರತಿಯೊಂದು ಆಹಾರದಲ್ಲಿಯೂ ರಾಸಾಯನಿಕ ಮತ್ತು ಕ್ರಿಮಿನಾಶಕ ಅಂಶ ಇದ್ದೇ ಇರುತ್ತದೆ. ಇದನ್ನು ಬಿಟ್ಟು ಬದುಕಲಾರದ ಸ್ಥಿತಿ ಎಲ್ಲ ಬೆಳೆಗಳಿಗೂ ಬಂದಿದೆ ಎಂದರು.
ರೈತರು ತಮ್ಮ ಮಕ್ಕಳ ಜನ್ಮ ದಿನದಂದು ಕೇಕ್ ಕತ್ತರಿಸುವ ಜತೆಗೆ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಪಣ ತೊಡಬೇಕಿದೆ. ಇದನ್ನು ಬಾಲ್ಯದಿಂದಲೇ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದ ವೇಳೆ ಹಾಜರಿದ್ದ ಒಡಿಪಿ ಸಂಸ್ಥೆಯ ರೈತ ಉತ್ಪಾದಕ ಸಂಸ್ಥೆಯ ಸದಸ್ಯರಿಗೆ ಮತ್ತು ಗ್ರಾಮಸ್ಥರಿಗೆ ಸಸಿಗಳನ್ನು ನೀಡಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ವೇಳೆ ರೈತ ಉತ್ಪಾದಕ ಸಮಿತಿಯ ಅಧ್ಯಕ್ಷ ಹನುಮೇಗೌಡ, ಉಪಾಧ್ಯಕ್ಷೆ ರತ್ನಮ್ಮ, ಸಂಸ್ಥೆಯ ಕಾರ್ಯಕರ್ತೆಯರಾದ ಭಾಗ್ಯಲಕ್ಷ್ಮೀ, ಲತಾ, ಗ್ರಾಮದ ಶಾಲಾ ಶಿಕ್ಷಕ ಶೀಲಾ, ರಾಜೇಶ್ವರಿ, ರೈತರು ಹಾಗೂ ಕೆ.ಕೋಡಿಹಳ್ಳಿ ಗ್ರಾಮಸ್ಥರು ಹಾಜರಿದ್ದರು.