ಗಾಯಾಳು ತುಕರಾಂ 
ಮಂಡ್ಯ

ರಸ್ತೆ ಗುಂಡಿಗೆ ಬಿದ್ದು ವ್ಯಕ್ತಿಗೆ ಗಾಯ

ಲೋಕೇಶ್ ಮನು. ಡಿ
ಪಾಂಡವಪುರ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಮೃತ್ ಯೋಜನೆ ಕುಡಿಯುವ ನೀರಿನ ಕಾಮಗಾರಿಗಾಗಿ ತೆಗೆದಿರುವ ರಸ್ತೆ ಗುಂಡಿಗೆ ಬೈಕ್ ಸವಾರರೊಬ್ಬರೂ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದಲ್ಲಿ ಇತ್ತೀಚೆಗೆ ಸಂಭವಿಸಿದೆ.
ಪಟ್ಟಣದ ಹಿರೋಡೆ ಬೀದಿಯ ನಿವಾಸಿ ತುಕರಾಂ ಗಾಯಗೊಂಡವರು. ಕಾರ್ಯಕ್ರಮ ನಿಮಿತ್ತ ಪಾಂಡವಪುರ ಪಟ್ಟಣದ ವಿಶ್ವೇಶ್ವರಯ್ಯ ನಾಲೆ ಏರಿ ಮೂಲಕ ಬೈಕ್‌ನಲ್ಲಿ ಪಟ್ಟಣಕ್ಕೆ ಆಗಮಿಸುವ ವೇಳೆ ಬಿಎಸ್ ಎಲ್ ಎನ್ ಕಚೇರಿ ವೃತ್ತದಲ್ಲಿ ತೆಗೆದಿದ್ದ ಗುಂಡಿಯಲ್ಲಿ ಬಿದ್ದಿದ್ದಾರೆ. ಘಟನೆಯಿಂದ ಅವರ ಎಡಗೈ ಬೆರಳು ಮುರಿದಿದ್ದು, ಮುಖ ಹಾಗೂ ಎಡಗೈ ತೋಳಿಗೆ ತೀವ್ರವಾಗಿ ಗಾಯವಾಗಿದೆ.
ಅಮೃತ್ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಆರಂಭವಾಗಿ ಐದಾರು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಪಟ್ಟಣ ವ್ಯಾಪ್ತಿಯಲ್ಲಿ ತೆಗೆದಿರುವ ರಸ್ತೆ ಗುಂಡಿಗಳನ್ನು ಮುಚ್ಚದ ಕಾರಣ ಬೈಕ್ ಸವಾರರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಅನೇಕರು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಪುರಸಭೆ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.