ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಮಲೆನಾಡು ಗಿಡ್ಡ ತಳಿ ಸಂರಕ್ಷಣಾ ಮತ್ತು ಸಂವರ್ಧನ ಅಭಿಯಾನ ವೇದಿಕೆ ದಕ್ಷಿಣ ಕನ್ನಡ ಸಹಯೋಗದಲ್ಲಿ ಮಲೆನಾಡು ಗಿಡ್ಡ ರಾಸುಗಳು ಉಚಿತ ವಿತರಣಾ ಕಾರ್ಯಕ್ರಮ ನಡೆಯಿತು. ಶ್ರೀ ನಿರ್ಮಲನಂದನಾಥ ಸ್ವಾಮೀಜಿ, ದಿನೇಶ್ ಗೂಳಿಗೌಡ, ಸಚಿನ್ ಚಲುವರಾಯಸ್ವಾಮಿ, ಅಕ್ಷಯ್ ಆಳ್ವ, ಸತ್ಯಪ್ಪ, ರಾಮಕೃಷ್ಣೇಗೌಡ, ದೇವರಾಜು, ಅಶೋಕ್, ರಮೇಶ್, ನಾಗೇಶ್ ಇದ್ದರು. 
ಮಂಡ್ಯ

ದೇಸಿ ತಳಿ ಗಿಡ್ಡ ರಾಸುಗಳು ರೈತನ ಮಿತ್ರ

ನಾಗೇಶ ಎಸ್
ಮದ್ದೂರು: ಭೂಮಿಯಲ್ಲಿ ರಾಸಾಯನಿಕಮುಕ್ತ ನೈಸರ್ಗಿಕ ಆಹಾರ ಬೆಳೆಯಲು ದೇಸಿ ತಳಿ ಮಲೆನಾಡು ಗಿಡ್ಡ ರಾಸುಗಳು ರೈತರ ಮಿತ್ರವಾಗಿವೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮಿ ಹೇಳಿದರು.
ಮಲೆನಾಡು ಗಿಡ್ಡ ತಳಿ ಸಂರಕ್ಷಣಾ ಮತ್ತು ಸಂವರ್ಧನ ಅಭಿಯಾನ ವೇದಿಕೆ ದಕ್ಷಿಣ ಕನ್ನಡ, ಸಹಯೋಗದಲ್ಲಿ ತಾಲೂಕಿನ ಕೊಪ್ಪ ಹೋಬಳಿಯ ಗೊಲ್ಲರದೊಡ್ಡಿ ಗ್ರಾಮದ ಕೊಲ್ಲಾಪುರದಮ್ಮ ದೇವಸ್ಥಾನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ರೈತರಿಗೆ ಮಲೆನಾಡು ಗಿಡ್ಡ ರಾಸುಗಳು ಉಚಿತ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾವಯವ ಕೃಷಿಗೆ ಉತ್ತೇಜಿಸುವ ಮತ್ತು ರೈತನ ಆತ್ಮಹತ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ ಸಾಂಕೇತಿಕವಾಗಿ 15 ಜತೆ ರಾಸುಗಳನ್ನು ಉಚಿವಾಗಿ ವಿತರಣೆ ಮಾಡಲಾಗಿದೆ. ಈ ರಾಸುಗಳ ಗೊಬ್ಬರ ಮತ್ತು ಗಂಜಲದಲ್ಲಿ ಕೃಷಿಗೆ ಬೇಕಾದ ಪೌಷ್ಟಿಕಾಂಶ ಸಿಗಲಿದೆ. ರೈತರ ಆರೋಗ್ಯ ಜತೆಗೆ ಭೂಮಿಯಲ್ಲಿ ಫಲವತ್ತತೆ ಹೆಚ್ಚು ಮಾಡುತ್ತದೆ. ಅಲ್ಲದೆ, ರೈತರು ಗಂಡು-ಹೆಣ್ಣು ಎರಡು ರಾಸುಗಳನ್ನು ಜತೆಯಲ್ಲಿ ಸಾಕಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು.
ರೈತರು ಯೂರಿಯಾದಂತಹ ರಾಸಾಯನಿಕ ವಿಷವನ್ನು ಭೂಮಿಗೆ ಉಣಿಸಿದರೆ, ಭೂಮಿಯು ಮರ, ಗಿಡ, ಹಣ್ಣು ತರಕಾರಿಗಳ ಮೂಲಕ ಮಾನವನಿಗೆ ರಿಟರ್ನ್ ನೀಡುತ್ತದೆ. ಇದರಿಂದ ಮನುಷ್ಯನ ಶರೀರ ವಿಷಯುಕ್ತವಾಗುತ್ತಿದೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ರೈತ ಸಾವಯವ ವ್ಯವಸಾಯ ಮಾಡುವುದು ಅವಶ್ಯ. ಜತೆಗೆ ದೇಸಿ ತಳಿ ರಾಸುಗಳ ಗೊಬ್ಬರವನ್ನು ವ್ಯವಸಾಯಕ್ಕೆ ಬಳಸಿದರೆ ಉತ್ಪಾದನೆ ವೆಚ್ಚ ಕಡಿಮೆ ಆಗಿ ಉತ್ಪಾದನೆ ಪ್ರಮಾಣ ಜಾಸ್ತಿ ಆಗುತ್ತೆ. ಜನರಲ್ಲಿ ಆರೋಗ್ಯದ ಕಾಳಜಿ ದಿನೇ ದಿನೇ ಹೆಚ್ಚುತ್ತಿದ್ದು ಸಾವಯವ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಕೂಡ ಜಾಸ್ತಿ ಆಗುತ್ತಿದೆ. ಭೂಮಿಯ ಆರೋಗ್ಯ ಕಾಪಾಡುವ ಜತೆಗೆ ರೈತರು ಆದಾಯ ದ್ವಿಗುಣ ಮಾಡಲು ದೇಸಿಯ ತಳಿ ರಾಸುಗಳ ಗೊಬ್ಬರವನ್ನು ಹೆಚ್ಚು ಮಾಡಬೇಕು ಎಂದರು.
ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಮಲೆನಾಡು ಗಿಡ್ಡ ತಳಿ ಸಂರಕ್ಷಣಾ ಮತ್ತು ಸಂವರ್ಧನೆ ಅಭಿಯಾನ ವೇದಿಕೆಯ ಅಕ್ಷಯ್ ಆಳ್ವ, ವಕೀಲರಾದ ಸತ್ಯ, ರಾಮಕೃಷ್ಣಗೌಡ, ದೇವರಾಜು, ಗ್ರಾಪಂ ಮಾಜಿ ಸದಸ್ಯ ರಮೇಶ್, ಮುಖಂಡರಾದ ಗೊಲ್ಲರದೊಡ್ಡಿ ಅಶೋಕ್, ನಾಗೇಶ್ ಇತರರು ಇದ್ದರು.