ಮಳವಳ್ಳಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಂಜೆ ಜಿಪಂ ಸಿಇಒ ಕೆ.ಆರ್.ನಂದಿನಿ ತಾಪಂ ಮತ್ತು ಗ್ರಾಪಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಚಂದ್ರು, ಶ್ರೀನಿವಾಸ್, ಪಾರ್ಥಸಾರಥಿ ಇದ್ದರು.
ಮಳವಳ್ಳಿ: ಸ್ವಚ್ಛ ಭಾರತ, ನರೇಗಾ, ಎನ್‌ಆರ್‌ಎಲ್‌ಎಂ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಗೆ ಸೋಮವಾರ ಸಂಜೆ ದಿಢೀರ್ ಭೇಟಿ ನೀಡಿದ ಅವರು, ತಾಪಂ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ಆಯೋಜಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ, ಸಾರ್ವಜನಿಕರಿಂದ ಸ್ವೀಕೃತವಾಗಿರುವ ಕುಂದುಕೊರತೆ ಅರ್ಜಿಗಳು, ಈವರೆಗೆ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಅನುಪಾಲನಾ ವರದಿಯನ್ನು ಪಡೆದು ಪರಿಶೀಲನೆ ನಡೆಸಿದರು.
ತುರ್ತು ಅಧಿಕಾರಿಗಳ ಸಭೆ ಕರೆದು ಮಾತನಾಡಿದ ಅವರು, ಜಿಪಂ, ತಾಪಂ, ಗ್ರಾಪಂಗಳಲ್ಲಿ ಆ.18 ರಿಂದ ಪ್ರತಿ ಸೋಮವಾರ ಸಾರ್ವಜನಿಕ ಕುಂದುಕೊರತೆ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಕಚೇರಿಗೆ ಈವರೆಗೆ 300ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ. ಈ ಅರ್ಜಿಗಳ ಕುರಿತು ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಇಂದಿನಿಂದ ತಾಪಂ ಕಚೇರಿಯಲ್ಲಿ ಅನುಪಾಲನಾ ಸಭೆ ನಡೆಸಲಾಗುತ್ತಿದೆ. ಮುಂದಿನ ವಾರ ಖುದ್ದು ಆಗಮಿಸಿ ಅನುಪಾಲನಾ ಸಭೆ ನಡೆಸಲಾಗುವುದು. ಅಷ್ಟರಲ್ಲಿ ಸ್ವೀಕೃತ ಅರ್ಜಿಗಳ ವಿಲೇವಾರಿಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಫಲಾನುಭವಿಗಳಿಗೆ ಪ್ರೋತ್ಸಾಹಧನ ಪಾವತಿಸಿ
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೌಚಗೃಹ ನಿರ್ಮಾಣ ಮಾಡಿಕೊಂಡಿರುವ ಫಲಾನುಭವಿಗಳಿಗೆ 12 ಸಾವಿರ ರೂ. ಪ್ರೋತ್ಸಾಹಧನ ಬಿಡುಗಡೆಯಾಗಿದ್ದು, ಸದರಿ ಅನುದಾನವನ್ನು ಫಲಾನುಭವಿಗಳಿಗೆ ಪಾವತಿಸಲು ಕ್ರಮವಹಿಸುವಂತೆ ಜಿಪಂ ಸಿಇಒ ಕೆ.ಆರ್.ನಂದಿನಿ ಪಿಡಿಗಳಿಗೆ ಸೂಚಿಸಿದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಾಮಗ್ರಿ ಮೊತ್ತವನ್ನು ಹಿರಿತನದ ಆಧಾರದಲ್ಲಿ ಪಾವತಿಸಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ. ತೆರಿಗೆ ವಸೂಲಿಯಲ್ಲಿ ಶೇ.100 ಪ್ರಗತಿ ಸಾಧಿಸಲು ಯೋಜನೆ ರೂಪಿಸಿ. ಗ್ರಾಪಂಗಳಲ್ಲಿನ ದಾಖಲೆಗಳು, ಇ-ಸ್ವತ್ತು ಸಂಬಂಧಿಸಿದ ಕಡತಗಳು ಸೇರಿದಂತೆ ಇತರ ದಾಖಲೆಗಳ ನಿರ್ವಹಣೆಗೆ ಗ್ರಾಪಂಗಳು ಸುಸಜ್ಜಿತ ಅಭಿಲೇಖಾಲಯಗಳನ್ನು ನಿರ್ವಹಣೆ ಮಾಡುವಂತೆ ಈಗಾಗಲೇ ಸೂಚಿಸಲಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಇಒ ಶ್ರೀನಿವಾಸ್‌ಗೆ ಸೂಚಿಸಿದರು.
ಹೊಸ ತಂತ್ರಾಂಶದ ಮೂಲಕ ಇ-ಸ್ವತ್ತು ವಿತರಣೆ ಮಾಡಲು ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಿ. ಈಗಾಗಲೇ ಈ ಬಗ್ಗೆ ಸಾಕಷ್ಟು ತರಬೇತಿ ನೀಡಲಾಗಿದ್ದು, ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಪಿಡಿಒಗಳಿಗೆ ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರು, ತಾಪಂ ಇಒ ಶ್ರೀನಿವಾಸ್, ಸಹಾಯಕ ನಿರ್ದೇಶಕ ಪಾರ್ಥಸಾರಥಿ, ಗ್ರಾಪಂ ಸಿಬ್ಬಂದಿ ಹಾಜರಿದ್ದರು.