ಮಳವಳ್ಳಿ ತಾಲೂಕಿನ ನಿಡಘಟ್ಟ ರಸ್ತೆಯಲ್ಲಿ ಸೋಮವಾರ ರಾತ್ರಿ ಕಾರಿನಲ್ಲಿ ಚಂದಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಶ್ರೀಧರ್ ಎಂಬುವರಿಗೆ ಕಾಣಿಸಿಕೊಂಡ ಚಿರತೆ.
ಮಳವಳ್ಳಿ: ತಾಲೂಕಿನ ವ್ಯಾಪ್ತಿಯಲ್ಲಿ ಚಿರತೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಚಿರತೆಗಳು ಸಾಕುಪ್ರಾಣಿಗಳನ್ನು ಮನೆ, ಜಮೀನುಗಳಲ್ಲಿ ದಾಳಿ ನಡೆಸಿ ಬಲಿ ಪಡೆಯುತ್ತಿರುವುದರ ಜತೆಗೆ ಗ್ರಾಮೀಣ ಪ್ರದೇಶದ ಮುಖ್ಯರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕವನ್ನುಂಟುಮಾಡಿವೆ.
ಮೊದ ಮೊದಲು ಕಾಡಂಚಿನ ಗ್ರಾಮಗಳಲ್ಲಿ ಚಿರತೆಗಳ ದಾಳಿ ನಡೆಯುತ್ತಿದ್ದವು. ಅದರೇ ಇತ್ತೀಚಿನ ದಿನಗಳಲ್ಲಿ ಬಯಲು ಪ್ರದೇಶಗಳ ಗ್ರಾಮಗಳು ಮತ್ತು ರೈತರ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಕಳೆದೊಂದು ವಾರದಲ್ಲೇ ವಿವಿಧ ಗ್ರಾಮಗಳಲ್ಲಿ ಸಾಕು ನಾಯಿಗಳು ಹಾಗೂ ಹತ್ತಾರು ಮೇಕೆ, ಕುರಿಗಳು ಚಿರತೆಗಳ ದಾಳಿಗೆ ಬಲಿಯಾಗಿವೆ.
ಸೋಮವಾರ ಸಂಜೆ ರಾಗಿಬೊಮ್ಮನಹಳ್ಳಿ ಗ್ರಾಮದ ಮಹೇಶ್ ಎಂಬ ರೈತ ಜಮೀನಿನ ಬಳಿ ಮೇಯಿಸುತ್ತಿದ್ದ ಮೇಕೆಯನ್ನು ಅವರ ಕಣ್ಣೆದುರೆ ಚಿರತೆ ಎಳೆದೊಯ್ದು ಕೊಂದು ಹಾಕಿದೆ. ಅದೇ ದಿನ ರಾತ್ರಿ ದಾಸನದೊಡ್ಡಿ ಗ್ರಾಮದಲ್ಲಿ ರಾಜು ಎಂಬುವರ ಮನೆ ಮುಂದೆ ಕಟ್ಟಿದ್ದ ನಾಯಿಯನ್ನು ಕಚ್ಚಿ ಎಳೆದುಕೊಂಡು ಹೋಗಿದ್ದು, ದಾಳಿಯ ದೃಶ್ಯ ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಂದಳ್ಳಿ ಗ್ರಾಮದ ಶ್ರೀಧರ್ ಎಂಬುವರು ರಾತ್ರಿ 11 ಗಂಟೆ ಸಮಯದಲ್ಲಿ ಕಾರಿನಲ್ಲಿ ಪಟ್ಟಣದಿಂದ ಸ್ವಗ್ರಾಮಕ್ಕೆ ತೆರಳುತ್ತಿರುವ ವೇಳೆ ನಿಡಘಟ್ಟ ಬಳಿ ಚಿರತೆ ರಸ್ತೆ ದಾಟುತ್ತಿದ್ದು, ಕಾರಿ ಹೆಡ್‌ಲೈಟ್ ಬೆಳಕಿಗೆ ಮುಂದೆ ಸಾಗದೆ ರಸ್ತೆ ಬದಿಯಲ್ಲಿ ಕುಳಿತಿದೆ. ಈ ಸನ್ನಿವೇಶವನ್ನು ಕಾರಿನಲ್ಲಿದ್ದ ಶ್ರೀಧರ್ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಜ.23ರಂದು ರಾತ್ರಿ ನಾರಾಯಣಪುರ ಗ್ರಾಮದ ರಾಣಿ ಎಂಬುವರು ಸಾಕಿದ್ದ ಮುದೋಳ್ ತಳಿಯ ನಾಯಿಯನ್ನು ಮನೆಯ ಆವರಣದಲ್ಲಿ ಕಟ್ಟಿದ್ದ ಸ್ಥಳದಲ್ಲೇ ಚಿರತೆ ನಾಯಿಯ ದೇಹನ್ನು ತಿಂದು ರುಂಡವನ್ನು ಬಿಟ್ಟು ಹೋಗಿದೆ. ಜ.3ರಂದು ಅಕ್ಕಮ್ಮನಕೊಪ್ಪಲು ಗ್ರಾಮದ ಮರಿಮಾದಪ್ಪ ಎಂಬ ರೈತ ತಮ್ಮ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಕೂಡಿದ್ದ ನಾಲ್ಕು ಮೇಕೆಗಳನ್ನು ಚಿರತೆ ದಾಳಿ ನಡೆಸಿ ಕೊಂದು ಒಂದು ಮೇಕೆಯನ್ನು ಎಳೆದೊಯ್ದಿದೆ. ಇದಲ್ಲದೇ ರಾವಣಿ, ಮೂಗನಕೊಪ್ಪಲು, ನೆಲ್ಲಿಗೆರೆ, ಕಂಚುಗಹಳ್ಳಿ, ಕಗ್ಗಲೀಪುರ, ಹಳದಾಸನಹಳ್ಳಿ, ದ್ಯಾವಪಟ್ಟಣ, ಬಿ.ಜಿ.ಪುರ ಸೇರಿದಂತೆ ಇನ್ನೂ ಹತ್ತಾರು ಬಯಲು ಪ್ರದೇಶಗಳಲ್ಲಿರುವ ಗ್ರಾಮಗಳಲ್ಲೇ ಚಿರತೆಗಳ ಹಾವಳಿ ಉಲ್ಬಣವಾಗಿರುವುದರಿಂದ ಸಹಜವಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಚಿರತೆಗಳಿಂದ ಜನರ ಪ್ರಾಣಕ್ಕೆ ಕಂಟಕವಾಗುವ ಮೊದಲು ಅರಣ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರ ಜತೆಗೆ ಜನರಲ್ಲಿರುವ ಭಯದ ವಾತಾವರಣ ಹೋಗಲಾಡಿಸಲು ಚಿರತೆಗಳ ಸೆರೆಗೆ ಸೂಕ್ತ ಕ್ರಮ ವಹಿಸಬೇಕೆಂದು ಜನ ಸಾಮಾನ್ಯರ ಆಗ್ರಹಿಸಿದ್ದಾರೆ.