ಬೆಂಗಳೂರಿನಲ್ಲಿ ರೈತ ಮುಖಂಡರನ್ನು ಬಂಧಿಸಿದ ಕ್ರಮ ಖಂಡಿಸಿ, ಬಿಡುಗಡೆಗೆ ಆಗ್ರಹಿಸಿ ಮಳವಳ್ಳಿ ಬಸ್ ನಿಲ್ದಾಣದ ಮುಂಭಾಗ ಶನಿವಾರ ನೈಸ್ ಭೂಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು. ಭರತ್‌ರಾಜ್, ಲಿಂಗರಾಜಮೂರ್ತಿ, ಮಹದೇವ, ಗುರುಸ್ವಾಮಿ, ಮರಿಲಿಂಗೇಗೌಡ, ಗಣೇಶ್, ಬ್ಲಫ್ ಪ್ರಮೋದ್ ಮತ್ತಿತರರಿದ್ದರು. 
ಮಂಡ್ಯ

ಭೂಗಳ್ಳರು, ದಂಧೆಕೋರರ ಪರ ಕಾಂಗ್ರೆಸ್ ಸರ್ಕಾರ

ರಾಜಣ್ಣ
ಮಳವಳ್ಳಿ: ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಭೂಗಳ್ಳರು, ದಂಧೆಕೋರರು, ರಿಯಲ್ ಎಸ್ಟೇಟ್ ಲೂಟಿಕೋರರ ಪರವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತರಾಜ್ ಆರೋಪಿಸಿದರು.
ನೈಸ್ ಭೂ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿಂದ ನೈಸ್ ಅಕ್ರಮದ ವಿರುದ್ಧ ಹೈಕೋರ್ಟ್ ನೀಡಿರುವ ತೀರ್ಪಿನಂತೆ ಟೋಲ್ ಸಂಗ್ರಹ ನಿಲ್ಲಿಸಿ ರೈತರಿಗೆ ಭೂಮಿ ವಾಪಸ್ ನೀಡಬೇಕೆಂದು ಬೆಂಗಳೂರಿನ ಮಾದಾವರ ಟೋಲ್ ಬಳಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ರೈತ ಮುಖಂಡರನ್ನು ಬಂಧಿಸಿದ ಕ್ರಮ ಖಂಡಿಸಿ ಹಾಗೂ ಬಿಡುಗಡೆಗೆ ಆಗ್ರಹಿಸಿ ಮಳವಳ್ಳಿ ಬಸ್ ನಿಲ್ದಾಣದ ಮುಂಭಾಗ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಅಕ್ರಮ ಭೂಸ್ವಾಧೀನ ಕೈಬಿಡಬೇಕು. ಹೈಕೋರ್ಟ್ ಛೀಮಾರಿ ಹಾಕಿರುವಂತೆ ರೈತರಿಗೆ ಭೂಮಿ ವಾಪಸ್ ಕೊಡಬೇಕು. ರಸ್ತೆ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಭೂಮಿಗೆ ಮಾರುಕಟ್ಟೆ ಮೌಲ್ಯದಂತೆ ಪರಿಹಾರ ನೀಡಬೇಕು. ನೈಸ್ ರಸ್ತೆಯನ್ನು ಸರ್ಕಾರ ವಶಪಡಿಸಿಕೊಂಡು ಉಚಿತವಾಗಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಬೇಕು ಆಗ್ರಹಿಸಿದರು.
ಪಹಣಿಯಲ್ಲಿ ನಮೂದಾಗಿರುವ ಕೆಐಎಡಿಬಿ ನಮೂದನ್ನು ರದ್ದುಪಡಿಸಬೇಕು. ಟೌನ್‌ಶಿಪ್ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು. ನೈಸ್ ಸಂಸ್ಥೆಯ ಸ್ಥಾಪಕ ಅಶೋಕ್ ಖೇಣಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಡಿ.ಕೆ. ಶಿವಕುಮಾರ್ ನೈಸ್ ಸಂಸ್ಥೆಯಲ್ಲಿ ಪಾಲುದಾರಿಕೆ ಪಡೆಯಲು ಹವಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಸರ್ಕಾರಕ್ಕೂ ಗುಂಡೂರಾವ್ ಸರ್ಕಾರಕ್ಕೆ ಬಂದ ದುರ್ಗತಿಯೇ ಬರಲಿದೆ ಎಂದು ಎಚ್ಚರಿಸಿದರು.
ವಿರೋಧ ಪಕ್ಷ ಬಿಜೆಪಿ ಜನಸಾಮಾನ್ಯರ ಪ್ರಶ್ನೆಗಳನ್ನು ಎತ್ತಿಕೊಂಡು ಹೋರಾಟ ನಡೆಸದೆ ಗಣೇಶ, ಆಂಜನೇಯನ ಹೆಸರಿನಲ್ಲಿ ಗಲಭೆ ಸೃಷ್ಟಿಸುತ್ತಿದೆ. ನೈಸ್ ಅಕ್ರಮ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ವಿಫಲವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಇ.ಮಹದೇವ, ಕಾರ್ಯದರ್ಶಿ ಗುರುಸ್ವಾಮಿ, ಪದಾಧಿಕಾರಿಗಳಾದ ಮರಿಲಿಂಗೇಗೌಡ, ಗಣೇಶ್, ಬ್ಲಫ್ ಪ್ರಮೋದ್, ಹನುಮಂತು, ಸಿದ್ದರಾಜ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಪದ್ಮಾ, ಜಯಮ್ಮ, ಬಸವರಾಜು, ಶಿವಕುಮಾರ್, ಕನ್ನಹಳ್ಳಿ ಶಂಕರ್, ಗೌಡರ ಶಿವಸ್ವಾಮಿ, ರಘುಸ್ವಾಮಿ, ಧ್ರುವ ಮತ್ತಿತರರಿದ್ದರು.