ಹಲಗೂರಲ್ಲಿ ಶಿವರಾತ್ರಿ ಶಿವಯೋಗಿ ಸ್ವಾಮೀಜಿಯವರ ರಥಯಾತ್ರೆಗೆ ಭವ್ಯ ಸ್ವಾಗತ  
ಮಂಡ್ಯ

ಶಿವರಾತ್ರೀಶ್ವರ ಜಯಂತಿ ಕಾರ್ಯಕ್ರಮ ಯಶಸ್ವಿಗೊಳಿಸಿ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಗವಿಮಠದ ಷಡಕ್ಷರ ಸ್ವಾಮೀಜಿ ಮನವಿ
  • ಪ್ರಚಾರ ರಥಕ್ಕೆ ಪುಷ್ಪಾರ್ಚನೆ
ಹಲಗೂರು: ಮಳವಳ್ಳಿಯಲ್ಲಿ ಡಿ.18ರಿಂದ ಆಯೋಜಿಸಿರುವ ಶ್ರೀ ಶಿವರಾತ್ರೀಶ್ವರ ಜಗದ್ಗುರು 1066ನೇ ಜಯಂತಿ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಆಗಮಿಸುತ್ತಿರುವುದು ವಿಶೇಷವಾಗಿದ್ದು, ಇದು ನಮ್ಮ ತಾಲೂಕಿಗೆ ಸೌಭಾಗ್ಯ ಎಂದು ಗವಿಮಠದ ಷಡಕ್ಷರ ಸ್ವಾಮೀಜಿ ಹೇಳಿದರು.
ವಿವಿಧಡೆ ಸಂಚರಿಸಿ ಹಲಗೂರು ಗ್ರಾಮಕ್ಕೆ ಬಂದ ಶಿವರಾತ್ರೀಶ್ವರ ಜಗದ್ಗುರು ಜಯಂತ್ಯುತ್ಸವ ಪ್ರಚಾರ ಕಾರ್ಯಕ್ರಮದ ರಥಕ್ಕೆ ಬುಧವಾರ ಪುಷ್ಪಾರ್ಚನೆ ಅರ್ಪಿಸಿ ಮಾತನಾಡಿದರು. ಆದಿ ಗುರು ಶಿವರಾತ್ರಿ ಜಗದ್ಗುರುಗಳ 1066ನೇ ಜಯಂತಿಯನ್ನು ಮಳವಳ್ಳಿ ತಾಲೂಕಿನಲ್ಲಿ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಪ್ರಚಾರ ರಥಯಾತ್ರೆಯನ್ನು ಹಲಗೂರಿನ ಎಲ್ಲ ಸಮಾಜದ ಪ್ರಮುಖ ಮುಖಂಡರು ಒಗ್ಗೂಡಿ ಅಭೂತಪೂರ್ವವಾಗಿ ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ ಎಂದರು.
ಪ್ರಚಾರ ಸಮಿತಿಯ ಶ್ರೀ ಸೋಮಶೇಖರ್ ಸ್ವಾಮೀಜಿ ಮಾತನಾಡಿ, 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶಿವರಾತ್ರಿ ಜಗದ್ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪಾಲ್ಗೊಳ್ಳುತ್ತಿದ್ದಾರೆ. ಇದು ಮಳವಳ್ಳಿ ತಾಲೂಕಿನ ಎಲ್ಲ ಗ್ರಾಮಗಳ ಜನರು ಸೇರಿ ಮಾಡುತ್ತಿರುವ ಕಾರ್ಯಕ್ರಮ. ಏಳು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಹಲಗೂರಿನ ಜನರು ಪಾಲ್ಗೊಳ್ಳಬೇಕೆಂದು ಎಂದು ಮನವಿ ಮಾಡಿದರು.
ರಥಕ್ಕೆ ಸ್ವಾಗತ: ಹಲಗೂರು ಸಮೀಪದ ಗವಿಮಠದಿಂದ ಹೊರಟು ಡಿ.ಹಲಸಹಳ್ಳಿ, ಬಾಣಸಮುದ್ರ, ಪುರುದೊಡ್ಡಿ, ತೊರೆಕಾಡನಹಳ್ಳಿ, ಹಲಗಾಪುರ ಗ್ರಾಮಗಳಲ್ಲಿ ಸಂಚಾರ ಮಾಡಿಕೊಂಡು, ಹಲಗೂರು ಗ್ರಾಮಕ್ಕೆ ಬಂದಾಗ ಎಲ್ಲ ವರ್ಗದ ಭಕ್ತಾದಿಗಳು ಸೇರಿ ರಥವನ್ನು ಸ್ವಾಗತಿಸಲಾಯಿತು. ಬಳಿಕ ಮೆರವಣಿಗೆ ಮುಖಾಂತರ ಹಲಗೂರು ವೃತ್ತದಲ್ಲಿ ರಥಕ್ಕೆ ಗವಿಮಠದ ಸ್ವಾಮೀಜಿ ಷಡಕ್ಷರ ಸ್ವಾಮೀಜಿ ಪುಷ್ಪಮಾಲೆ ಅರ್ಪಿಸಿದರು. ನಂತರ ರಥವು ಗೊಲ್ಲರಹಳ್ಳಿ, ಬ್ಯಾಡರಹಳ್ಳಿ, ಗಾಣಾಳು, ಮರಿಜೋಗಿ ದೊಡ್ದಿ, ಕೊನ್ನಾಪುರ, ಬಸವೇಗೌಡನದೊಡ್ಡಿ, ದಳವಾಯಿ ಕೋಡಿಹಳ್ಳಿ, ಕೆಂಪಯ್ಯನ ದೊಡ್ಡಿ, ನಂದೀಪುರ, ಗುಂಡಾಪುರ ಸೇರಿದಂತೆ ಇತರ ಗ್ರಾಮಗಳಲ್ಲೂ ಸಹ ರಥ ಬಂದಾಗ ಗ್ರಾಮಸ್ಥರು ವಿಶೇಷವಾಗಿ ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ರಾಗಿ ಬೊಮ್ಮನಹಳ್ಳಿಯ ಶ್ರೀ ಪ್ರಭುಲಿಂಗ ಸ್ವಾಮೀಜಿ, ಪ್ರಚಾರ ಸಮಿತಿಯ ಶ್ರೀಧರ್, ಸುತ್ತೂರು ಮಠದ ಧರ್ಮ ಪ್ರಚಾರಕ ಶೇಖರ್, ಹಲಗೂರು ವೀರಶೈವ ಸಮಾಜದ ಅಧ್ಯಕ್ಷ ಮಹಾದೇವಸ್ವಾಮಿ, ಮುಖಂಡರಾದ ಚಂದ್ರಪ್ಪ, ಎಚ್.ಆರ್.ವಿಶ್ವ, ಎನ್.ಕೆ.ಕುಮಾರ್, ಪುಟ್ಟೇಗೌಡ, ಬಿ.ಪುಟ್ಟಸ್ವಾಮಿ, ಪರಮೇಶ, ಗಂಗಾಧರ ಸ್ವಾಮಿ, ಅಭಿಜಿತ್, ಎ.ವಿ.ಟಿ.ಕುಮಾರ್, ರಾಜೇಂದ್ರ, ಗಿರೀಶ, ಮಲ್ಲೇಶ, ಕಿರಣ, ಮರಿಸ್ವಾಮಿ, ಮಂಜುನಾಥ, ಎಚ್.ಎನ್.ವಿರೂಪಾಕ್ಷಮೂರ್ತಿ, ಬೆಟ್ಟಪ್ಪ ಇತರರು ಇದ್ದರು.