ಕೆ.ಆರ್.ಪೇಟೆ ತಾಲೂಕಿನ ಬಣ್ಣೇನಹಳ್ಳಿ ಗ್ರಾಮದಲ್ಲಿರುವ ಫೇವರಿಚ್ ಗ್ರೂಪ್‌ನ ಮೆಗಾ ಫುಡ್‌ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಮೆಗಾ ಆರೋಗ್ಯ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು.ಆರ್.ದಯಾನಂದಕುಮಾರ್, ಡಾ.ನಾಗೇಂದ್ರ, ಪ್ರಶಾಂತ್ ರಾವ್, ವಿಶಾಲ್ ನಾಯ್ಡು ಇತರರಿದ್ದರು. 
ಮಂಡ್ಯ

ಆರೋಗ್ಯ ಕಾಪಾಡಿಕೊಂಡು ದೇಶದ ಬೆಳವಣಿಗೆಗೆ ಸಹಕರಿಸಿ

ಪ್ರಮುಖ ಮುಖ್ಯಾಂಶಗಳು

  • ಫೇವರಿಚ್ ಗ್ರೂಪ್‌ನ ಉಪಾಧ್ಯಕ್ಷ ಆರ್.ದಯಾನಂದಕುಮಾರ್ ಸಲಹೆ
ಕೆ.ಆರ್.ಪೇಟೆ: ನೌಕರರು ಆರೋಗ್ಯ ಕಾಪಾಡಿಕೊಂಡು ಉದ್ಯಮಗಳ ಬೆಳವಣಿಗೆಗೆ ಕೊಡುಗೆ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಫೇವರಿಚ್ ಗ್ರೂಪ್‌ನ ಉಪಾಧ್ಯಕ್ಷ ಆರ್.ದಯಾನಂದಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಬಣ್ಣೇನಹಳ್ಳಿ ಗ್ರಾಮದಲ್ಲಿರುವ ಫೇವರಿಚ್ ಗ್ರೂಪ್‌ನ ಮೆಗಾ ಫುಡ್‌ಪಾರ್ಕ್‌ನಲ್ಲಿ ಫೇವರಿಚ್ ಗ್ರೂಪ್ ಹಾಗೂ ರೋಟರಿ ಬೆಂಗಳೂರು ಮಹಾಲಕ್ಷ್ಮೀ ಸೆಂಟ್ರಲ್ ಸಹಯೋಗದಲ್ಲಿ ಉದ್ಯಮಗಳ ನೌಕರರು, ಅವರ ಕುಟುಂಬ ಸದಸ್ಯರಿಗೆ ಶನಿವಾರ ಹಮ್ಮಿಕೊಂಡಿದ್ದ ಮೆಗಾ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಫೇವರಿಚ್ ಗ್ರೂಪ್‌ಗೆ 40 ವರ್ಷದ ಅನುಭವವಿದೆ. ಸಣ್ಣ ಉದ್ಯಮದಿಂದ ದೊಡ್ಡ ಉದ್ಯಮವಾಗಿ ಗ್ರೂಪ್ ಅಧ್ಯಕ್ಷ ಜಯದೇವ ಬೆಳೆಸಿದ್ದಾರೆ. ಮೊದಲಿಗೆ ಕೃಷಿ ಸರಕು ವ್ಯಾಪಾರ, ಆಮದು, ರಫ್ತು ಹಾಗೂ ತಯಾರಿಕಾ ಕ್ಷೇತ್ರಗಳಿಗೆ ವಿಸ್ತರಣೆ ಆಗಿದೆ. ಈಗ ಕೃಷಿ ಹಾಗೂ ಆಹಾರ ಸಂಬಂಧಿತ ಉದ್ಯಮಕ್ಕೂ ಪದಾರ್ಪಣೆ ಮಾಡಿದೆ. ಗ್ರೂಪ್ ದೇಶದಲ್ಲಿ ಸ್ನ್ಯಾಕ್ ಆಹಾರ ಕಚ್ಚಾ ವಸ್ತುಗಳ ತಯಾರಿಕೆ ಹಾಗೂ ಪೂರೈಕೆ ಮಾಡುತ್ತಿದ್ದಾರೆ. ಪೆಪ್ಸಿಕೋ, ಪಾರ್ಲೆ, ಐಟಿಸಿ ಸೇರಿದಂತೆ ಹಲವು ಜಾಗತಿಕ ಸಂಸ್ಥೆಗಳಿಗೆ ಪೂರೈಸುತ್ತಿದೆ ಎಂದು ಹೇಳಿದರು.
2014 ರಲ್ಲಿ ಹೊಸತಂತ್ರಜ್ಞಾನದಿಂದ ಮೂಲಸೌಕರ್ಯ ಕ್ಷೇತ್ರಕ್ಕೆ ಪ್ರವೇಶಿಸಿ, ಮೆಗಾ ಫುಡ್ ಪಾರ್ಕ್ ಮತ್ತು ಇಂಡಸ್ಟ್ರಿಯಲ್ ಪಾರ್ಕ್  ನಿರ್ಮಿಸಲಾಗಿದ್ದು, ಉದ್ಯಮಿಗಳಿಗೆ ಸುಗಮ ಹಾಗೂ ತೊಂದರೆರಹಿತ ವಾತಾವರಣ ಒದಗಿಸುವುದು, ಭೂಮಿ ಹಂಚಿಕೆ, ಹೂಡಿಕೆ ಬೆಂಬಲ, ಮೂಲಭೂತ ಹಾಗೂ ಅಗತ್ಯ ಸೌಲಭ್ಯಗಳು ಹಾಗೂ ಕಾನೂನು ಅನುಮತಿಗಳ ಸಹಾಯ, ಫುಡ್ ಪಾರ್ಕ್‌ನಲ್ಲಿರುವ ಕೈಗಾರಿಕೆಗಳು ರೈತರಿಂದ ನೇರವಾಗಿ ಕಚ್ಚಾ ವಸ್ತುಗಳನ್ನು ಖರೀದಿಸುವ ಮೂಲಕ ಮಧ್ಯವರ್ತಿಗಳ ನಿವಾರಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಗ್ರಾಮೀಣ ಯುವಕರಿಗೆ ಸ್ಮಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ, ಜನಸಂದಣಿಯ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲಾಗುತ್ತಿದೆ ಎಂದರು.
ಫೇವರಿಟ್ ಗ್ರೂಪ್ ಕರ್ನಾಟಕದ ವಿವಿಧ ಭಾಗಗಳಲ್ಲಿ 500 ಎಕರೆ ವ್ಯಾಪ್ತಿಯ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಫೇವರಿಚ್ ಮೆಗಾ ಫುಡ್ ಪಾರ್ಕ್ ಮತ್ತು ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ಈಗಾಗಲೇ 10 ದೊಡ್ಡ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಕೆ.ಆರ್. ಪೇಟೆ ತಾಲೂಕು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನೇರ ಮತ್ತು ಪರೋಕ್ಷವಾಗಿ ಸುಮಾರು 1,000 ಜನರಿಗೆ ಉದ್ಯೋಗವಕಾಶ ಒದಗಿಸಿದೆ. ಮುಂದಿನ ದಿನಗಳಲ್ಲಿ  2,000 ರಿಂದ 3,000 ಉದ್ಯೋಗಾವಕಾಶ ಸೃಷ್ಟಿಸುವ ಭರವಸೆ ನೀಡಿದರು.
ಆರೋಗ್ಯ ಶಿಬಿರಕ್ಕೆ ರೋಟರಿ ಕ್ಲಬ್ ಕೈಜೋಡಿಸಿರುವುದಕ್ಕೆ ನಮಗೆ ಅಪಾರ ಹೆಮ್ಮೆ ಇದೆ. ಆರಂಭಿಕ ಹಂತದಲ್ಲಿ ರೋಗ ಪತ್ತೆಹಚ್ಚುವುದು ಗಂಭೀರ ಕಾಯಿಲೆಗಳನ್ನು ತಡೆಯಲು ಹಾಗೂ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಹಕಾರಿ ಎಂದು ತಿಳಿಸಿದರು.
ಬೆಂಗಳೂರಿನ ಆಸರೆ ರೋಟರಿ ಸೆಂಟರ್ ತಂಡಕ್ಕೆ 120 ಜನ ರಕ್ತದಾನ ಮಾಡಿದ್ದಾರೆ. ಭಾರತ್ ಕ್ಯಾನ್ಸರ್ ಆಸ್ಪತ್ರೆ ತಂಡ 300 ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ ನಡೆಸಿದೆ. 280 ಜನರಿಗೆ ಕಣ್ಣಿನ ತಪಾಸಣೆ ನಡೆಸಿ, ಅವಶ್ಯಕತೆ ಇರುವ 120 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಿದೆ. ಉಳಿದವರು ಮೈಸೂರಿನ ಎಎಸ್‌ಜಿ ಕಣ್ಣಿನ ಆಸ್ಪತ್ರೆಯಲ್ಲಿ ಕನ್ನಡಕ ವಿತರಣೆಗೆ ಯೋಜಿಸಲಾಗಿದೆ. ಮೈಸೂರಿನ ಡೆಂಟ್ ಮತ್ತು ಡರ್ಮ್ ಆಸ್ಪತ್ರೆಯ ವೈದ್ಯರು 250 ಜನರಿಗೆ ಹಲ್ಲಿನ ತಪಾಸಣೆ ನಡೆಸಿದರು. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವೈದ್ಯರಿಂದ ಸಾಮಾನ್ಯ ಚಿಕಿತ್ಸೆ, ಬ್ಲಡ್, ಬಿಪಿ, ಡಯಾಬಿಟಿಸ್ ಪರೀಕ್ಷೆ, ಆರ್ಥೋಪೆಡಿಕ್ಸ್ ತಪಾಸಣೆಯನ್ನು ಸುಮಾರು 500 ಜನರಿಗೆ ಮಾಡಲಾಯಿತು. 
ರೋಟರಿ ಸಂಸ್ಥೆಯ ಪಿಡಿಜಿ ಡಾ.ನಾಗೇಂದ್ರ, ಬೆಂಗಳೂರಿನ ಮಹಾಲಕ್ಷ್ಮೀ ಸೆಂಟ್ರಲ್ ರೋಟರಿ ಅಧ್ಯಕ್ಷ ಪ್ರಶಾಂತ್ ರಾವ್, ಸಂಸ್ಥೆಯ ನಿರ್ದೇಶಕ ವಿಶಾಲ್ ನಾಯ್ಡು, ಸಂಸ್ಥೆಯ ಅಧ್ಯಕ್ಷ ಜಯದೇವ್, ಕಾರ್ಯದರ್ಶಿ ಚಿರುದೀಪ್ ಇದ್ದರು.