ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ವಿದ್ಯಾರ್ಥಿಗಳು ಮತ್ತು ಲಯನ್ಸ್ ಕ್ಲಬ್ ಸದಸ್ಯರು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದರು.
ಹಲಗೂರು: ಪುಣ್ಯ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಪದಾರ್ಥಗಳನ್ನು ಬಿಸಾಡುವುದು, ಸ್ವಚ್ಛತೆ ಕಾಪಾಡದಿರುವುದರಿಂದ ಭಕ್ತಾದಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದ ಪರಿಸರ ಸ್ವಚ್ಛತೆ ಕಾಪಾಡಬೇಕು ಎಂದು ಬೆಂಗಳೂರಿನ ಲಯನ್ಸ್ ಕ್ಲಬ್ ಮತ್ತು ಪರಿಸರ ಮುಖ್ಯಸ್ಥ ಡಾ.ಮಂಜುನಾಥ್ ತಿಳಿಸಿದರು.
ಸಮೀಪದ ಪ್ರೇಕ್ಷಣೀಯ ಸ್ಥಳವಾದ ಮುತ್ತತ್ತಿಯ ಕಾವೇರಿ ನದಿಯ ದಡದಲ್ಲಿ ಶನಿವಾರ ಹಲಗೂರು ಲಯನ್ಸ್ ಸಂಸ್ಥೆ ಮತ್ತು ವಿವೇಕಾನಂದ ಕಾನೂನು ಕಾಲೇಜು, ಬೆಂಗಳೂರು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್ ಪದಾರ್ಥಗಳನ್ನು ಬಳಕೆ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಅರಿವು ಮೂಡಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.
ಹಲಗೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಎ.ಟಿ.ಶ್ರೀನಿವಾಸ್ ಮಾತನಾಡಿ, ಬೆಂಗಳೂರಿನ ಕಾನೂನು ವಿಭಾಗದ ವಿದ್ಯಾರ್ಥಿಗಳು ನಮ್ಮ ಮುತ್ತತಿಗೆ ಬಂದು ಪ್ಲಾಸ್ಟಿಕ್ ಸ್ವಚ್ಛತೆ ಮಾಡಿರುವುದು ಶ್ಲಾಘನೀಯ. ಇದೇ ರೀತಿ ಸ್ವಚ್ಛತೆ ಕಾಪಾಡುವ ಜತೆಗೆ ಪ್ರವಾಸಿತಾಣಕ್ಕೆ ಬರುವವರಿಗೆ ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎಂಬ ಅರಿವು ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಲಗೂರಿನ ಲಯನ್ಸ್ ಕ್ಲಬ್‌ನ ಡಾ.ನಾಗೇಶ್, ನಿವೃತ್ತ ಶಿಕ್ಷಕ ಎ.ಎಸ್.ದೇವರಾಜು, ಸಿ.ಪ್ರವೀಣ, ಅರಣ್ಯ ಇಲಾಖೆ ಅಧಿಕಾರಿ ಮತ್ತು ವಿದ್ಯಾರ್ಥಿಗಳು ಇದ್ದರು.