ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಾತನಾಡಿದರು.
- ನಗರದಲ್ಲಿ ಅಹವಾಲು ಸ್ವೀಕಾರ ಸಭೆ
- ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜನೆ
ಮಂಡ್ಯ: ಮಹಿಳೆಯರು ದೂರು ನೀಡಲು ಪೊಲೀಸ್ ಠಾಣೆಗೆ ಬಂದ ಸಮಯದಲ್ಲಿ ಅವರನ್ನು ಗೌರವದಿಂದ ಕಾಣಬೇಕು. ಜತೆಗೆ ಅವರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಪೊಲೀಸರ ಕರ್ತವ್ಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ಜನ್ ಸುನ್ವಾಯಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರಿಗೆ ತೊಂದರೆಯಾಗದಂತೆ ಲಿಂಗ ಸೂಕ್ಷ್ಮತೆ ಕಾರ್ಯಕ್ರಮ ಮಾಡಬೇಕು. ಆಂತರಿಕ ದೂರು ಸಮಿತಿ ರಚನೆ ಬಗ್ಗೆ ಎಲ್ಲ ಶಾಲಾ-ಕಾಲೇಜಿಗೆ ಭೇಟಿ ನೀಡಿ ಆಂತರಿಕ ದೂರು ಸಮಿತಿಯ ಕಾರ್ಯಕ್ರಮದ ಮಾಹಿತಿ ಹಾಗೂ ಅರಿವು ಮೂಡಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ವಿವರಗಳನ್ನು ಮಹಿಳಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಡಿಜಿಟಲ್ ಪೊಲೀಸ್ ಕ್ರಾಂತಿ ಕಾರ್ಯಕ್ರಮ ಮಾಡಬೇಕು. ಠಾಣೆಗೆ ಬಂದ ಮಹಿಳೆಯರ ಸಮಸ್ಯೆಗಳನ್ನು ಪರಿಶೀಲಿಸಬೇಕು. ಎಲ್ಲ ಪೊಲೀಸ್ ಠಾಣೆಗಳಲ್ಲಿ ಮಹಿಳೆಯರು ದೂರುಗಳನ್ನು ಸಲ್ಲಿಸಲು ಕ್ಯೂ ಆರ್ ಕೋಡ್ ವ್ಯವಸ್ಥೆ ಮಾಡಿಬೇಕು. ಮಹಿಳಾ ಹಾಗೂ ಮಕ್ಕಳ ಭದ್ರತೆ ಮತ್ತು ರಕ್ಷಣೆ ಮಾಡುವ ನಿಟ್ಟಿನಲ್ಲಿ ಅಕ್ಕಪಡೆ ವಾಹನಗಳನ್ನು ಆಯೋಜಿಸಿದ್ದು ಶಾಲೆ-ಕಾಲೇಜು, ಉದ್ಯಾನ, ಆಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ಇನ್ನಿತರ ಸ್ಥಳಗಲ್ಲಿ ಪರಿಶೀಲನೆ ನಡೆಸುವುದು ಅಗತ್ಯ. ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸಹಾಯವಾಣಿ ಸಂಖ್ಯೆ ಕಾಣುವಂತೆ ಅಳವಡಿಸಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ವಿದ್ಯಾರ್ಥಿ ನಿಲಯಗಳಿಗೆ ಮೆಡಿಕಲ್ ಸೌಲಭ್ಯವನ್ನು ಕಡ್ಡಾಯವಾಗಿ ಒದಗಿಸಬೇಕು. ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಉಂಟಾಗದಂತೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛತೆಯಿಂದ ಕಾಪಾಡಬೇಕು. ಜಿಲ್ಲೆಯ ಎಲ್ಲ ಬಸ್ ನಿಲ್ದಾಣದಲ್ಲಿ ಮಕ್ಕಳ ಪಾಲನಾ ಕೇಂದ್ರ(ಮಕ್ಕಳಿಗೆ ಹಾಲುಣಿಸುವ ಕೊಠಡಿ ) ಸ್ಥಾಪಿಸುವುದರ ಜತೆಗೆ ಸ್ವಚ್ಛತೆ ಕಾಪಾಡಬೇಕು. ಜತೆಗೆ ಶೌಚಗೃಹ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು. ಜಿಲ್ಲಾ ಪೊಲೀಸ್ ಇಲಾಖೆಯು ಮೈಕ್ರೋ ಫೈನಾನ್ಸ್‌ನಿಂದ ಆಗುತ್ತಿರುವ ಸಮಸ್ಯೆಗಳಿಗೆ ಕಡಿವಾಣ ಹಾಕುವ ಮೂಲಕ ಮಾದರಿಯಾಗಿದ್ದು, ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ಹಾಗೂ ಬಾಲ್ಯ ವಿವಾಹ ತಡೆಯುವಲ್ಲಿ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಜಿಲ್ಲಾ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಿಗೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ಮೂರು ದಿನಕ್ಕಿಂತ ದೀರ್ಘಾವದಿಯಲ್ಲಿ ಗೈರು ಹಾಜರಿಯಾದರೆ ಪ್ರಾಂಶುಪಾಲರು ಸಂಬಂಧಪಟ್ಟ ಮಕ್ಕಳ ಪಾಲಕರನ್ನು ಭೇಟಿ ಮಾಡಿ ಮಾಹಿತಿ ಪರಿಶೀಲಿಸಿ ನಡೆಸಿ ವಿವರ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿ, ಜಿಲ್ಲೆಯಲ್ಲಿ 2024ನೇ ಸಾಲಿನಲ್ಲಿ 420 ಮಹಿಳೆಯರು ಕಾಣೆಯಾಗಿದ್ದು, ಈ ಪೈಕಿ 410 ಮಹಿಳೆಯರನ್ನು ಪತ್ತೆ ಹಚ್ಚಲಾಗಿದೆ. 2025ನೇ ಸಾಲಿನಲ್ಲಿ 483 ಕಾಣೆಯಾದವರ ಪ್ರಕರಣಗಳು ಆಗಿದ್ದು, 468 ಕಾಣೆಯಾದವರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ, ಜಿಪಂ ಸಿಇಒ ಕೆ.ಆರ್.ನಂದಿನಿ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಆಶಾ ಇತರರಿದ್ದರು. ಇದೇ ವೇಳೆ ಐದು ತಾಸಿಗೂ ಹೆಚ್ಚು ಕಾಲ ನಿರಂತರವಾಗಿ ನಡೆದ ಮಹಿಳಾ ಜನ್ ಸುನ್ವಾಯಿಯಲ್ಲಿ 250ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾದವು.
ಆಯೋಗದ ಪ್ರತಿನಿಧಿಗಳ ನೇಮಕಕ್ಕೆ ಚಿಂತನೆ
ಪ್ರತಿ ಜಿಲ್ಲೆಗಳಲ್ಲೂ ಮಹಿಳಾ ಆಯೋಗದ ಪ್ರತಿನಿಧಿಗಳನ್ನು ನೇಮಿಸಿ ಮಹಿಳೆಯರಿಂದ ಅಹವಾಲು ಸ್ವೀಕರಿಸಲು ಚಿಂತಿಸಲಾಗಿದೆ ಎಂದು ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಮಹಿಳೆಯರು ಮೊಬೈಲ್‌ನಲ್ಲೇ ಅಹವಾಲು ಸಲ್ಲಿಸಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗುವುದು. ಜತೆಗೆ, ಮಹಿಳೆಯ ಸಮಸ್ಯೆಗಳನ್ನು ಆಲಿಸಲು ಸಹಾಯವಾಣಿ ತೆರೆಯಲು ಆಲೋಚಿಸಲಾಗಿದೆ. ಆಯೋಗದಲ್ಲಿ ಸಿಬ್ಬಂದಿ ಕೊರತೆಯಿದೆ. ಕೇವಲ 8 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 30 ವರ್ಷದ ಹಿಂದೆ ಇದ್ದಷ್ಟೇ ಸಿಬ್ಬಂದಿ ಈಗಲೂ ಇದ್ದಾರೆ. ಹೀಗಾಗಿ ಕನಿಷ್ಟ 50 ಹುದ್ದೆಗಳ ಮಂಜೂರಾತಿಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸಿಬ್ಬಂದಿ ದೊರೆತರೆ ಪ್ರತಿ ಜಿಲ್ಲೆಗಳಲ್ಲೂ ಆಯೋಗದ ಪ್ರತಿನಿಧಿಗಳನ್ನು ನೇಮಿಸಿ ಸ್ಥಳೀಯವಾಗಿಯೇ ಮಹಿಳೆಯರ ದೂರುಗಳಿಗೆ ಸ್ಪಂದಿಸುವ ಜತೆಗೆ ಅಹವಾಲುಗಳನ್ನು ಸ್ವೀಕರಿಸಿ ತ್ವರಿತವಾಗಿ ವಿಲೇ ಮಾಡಬಹುದು ಎಂದರು.
ಉತ್ತರ ಕನ್ನಡ ಜಿಲ್ಲೆ ಹೊರತಾಗಿ ನಾನು ಈಗಾಗಲೇ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲೆಡೆಯೂ ದೂರುಗಳು ಹೆಚ್ಚಾಗಿ ಬರುತ್ತಿವೆ. ನಾನು ಅಧ್ಯಕ್ಷೆಯಾದ ಬಳಿಕ ಬರುತ್ತಿರುವ ದೂರು ಅರ್ಜಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಮಂಡ್ಯದಲ್ಲೂ ಇಂದು 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಎಲ್ಲ ಅಹವಾಲುಗಳಿಗೂ ಸ್ಪಂದಿಸಲಾಗಿದೆ ಎಂದು ತಿಳಿಸಿದರು.