ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಎಚ್.ಬಿ.ಶುಭದಾಯಿನಿ ಮಾತನಾಡಿದರು. 
ಮಂಡ್ಯ

ಏ.10ರಂದು ಕೆರಗೋಡಿನಲ್ಲಿ ವಿವಿಧ ಸ್ಪರ್ಧೆ ಆಯೋಜನೆ: ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶುಭದಾಯಿನಿ ಮಾಹಿತಿ

ಪ್ರಮುಖ ಮುಖ್ಯಾಂಶಗಳು

  • ಅಂತಾರಾಷ್ಟ್ರೀಯ ಮಹಿಳಾ ದಿನದ ಆಚರಣೆ
  • ರಂಗೋಲಿ, ಹಗ್ಗಜಗ್ಗಾಟ, ಬಿಂದಿಗೆ ಓಟ, ಮ್ಯೂಸಿಕಲ್ ಚೇರ್, ಇಂಧನ ರಹಿತ ಅಡುಗೆ ಸ್ಪರ್ಧೆ
ಮಂಡ್ಯ: ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏ.10ರಂದು ಬೆಳಗ್ಗೆ 10ಗಂಟೆಗೆ ತಾಲೂಕಿನ ಕೆರಗೋಡು ಗ್ರಾಮದ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಹಾಗೂ ಸ್ತ್ರೀಶಕ್ತಿ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಎಚ್.ಬಿ.ಶುಭದಾಯಿನಿ ತಿಳಿಸಿದರು.
ಗ್ರಾಮೀಣ ಮಹಿಳೆಯರಿಗೂ ಕ್ರೀಡಾಕೂಟಗಳಲ್ಲಿ ಅವಕಾಶ ಕಲ್ಪಿಸಲು ಈ ಸ್ಪರ್ಧೆ ನಡೆಸಲಾಗುತ್ತಿದೆ. ಶಾಸಕ ಪಿ.ರವಿಕುಮಾರ್ ಗಣಿಗ ಸ್ಪರ್ಧೆಗೆ ಚಾಲನೆ ನೀಡುವರು. ರಂಗೋಲಿ, ಹಗ್ಗಜಗ್ಗಾಟ, ಬಿಂದಿಗೆ ಓಟ, ಮ್ಯೂಸಿಕಲ್ ಚೇರ್, ಇಂಧನ ರಹಿತ ಅಡುಗೆ ಸ್ಪರ್ಧೆ ನಡೆಸಲಾಗುವುದು. ಕೆರಗೋಡು, ಮಾರಗೌಡನಹಳ್ಳಿ, ಹೊಡಾಘಟ್ಟ, ಹುಲಿವಾನ ಗ್ರಾ.ಪಂಗಳಿಗೆ ಮಾತ್ರ ಈ ಸ್ಪರ್ಧೆ ಸೀಮಿತವಾಗಿದೆ. ಈಗಾಗಲೇ 1,500 ಜನ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಧ್ಯಾಹ್ನ 3 ಗಂಟೆಗೆ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ಗಣಿಗ ವಹಿಸುವರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಚ್.ಬಿ.ಶುಭದಾಯಿನಿ ಪ್ರಾಸ್ತಾವಿಕವಾಗಿ ನುಡಿವರು. ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಜಿ.ಪಂ ಸಿಇಒ ಕೆ.ಆರ್.ನಂದಿನಿ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್ ಉಪಸ್ಥಿತರಿರುವರು ಎಂದು ವಿವರಿಸಿದರು.
ಉಪಾಧ್ಯಕ್ಷೆ ಶಾರದಮ್ಮ, ಸುಜಾತಾಮಣಿ, ಅನುರಾಧಾ, ಶಕುಂತಲಾ, ರಾಧಾ ಇತರರಿದ್ದರು.