ಮಂಡ್ಯದಲ್ಲಿ ಆಯೋಜಿಸಿದ್ದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು.  
ಮಂಡ್ಯ

ಕ್ಷಣಿಕ ವಸ್ತುಗಳಿಗಾಗಿ ಜೀವನಪೂರ್ತಿ ಹೋರಾಟ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಶಿವರಾತ್ರಿ ಮಹೋತ್ಸವದಲ್ಲಿ ಆಶೀರ್ವಚನ
  • ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಆಯೋಜನೆ
ಮಂಡ್ಯ: ಗಮನ ಸೆಳೆಯುವ ವಸ್ತುಗಳು ಸಿಗುವವರೆಗೂ ಆಕರ್ಷಣೆಯಷ್ಟೇ. ಆ ವಸ್ತು ಸಿಕ್ಕ ಸ್ವಲ್ಪ ಸಮಯಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತವೆ. ಇಂತಹ ಕ್ಷಣಿಕ ವಸ್ತುಗಳನ್ನು ನಂಬಿ ನಿತ್ಯ ಜೀವನ ಪರ್ಯಂತ ಹೋರಾಡುತ್ತಿರುತ್ತೇವೆ. ಇದರಿಂದ ಹೊರಗುಳಿದು ಕಳೆದುಕೊಂಡಿರುವ ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೆ ಹೋರಾಡಬೇಕಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿರುವ ಮಹಾಶಿವರಾತ್ರಿ ಮಹೋತ್ಸವ ಹಾಗೂ ಯುವಜನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನಸ್ಸು ಜಾಗೃತಿಯಲ್ಲಿರಬೇಕು. ಮನಸ್ಸಿನ ಮೇಲೆ ಬೆಳಕು ಚೆಲ್ಲುವ ಬುದ್ಧಿ ಇಲ್ಲದಿದ್ದರೆ ಬೆಲೆ ಇರುವುದಿಲ್ಲ. ಅಂತೆಯೇ ನಾನು ಎಂಬ ಪ್ರಜ್ಞೆಯೇ ಇಲ್ಲದಿದ್ದರೆ ಯಾವುದಕ್ಕೂ ಬೆಲೆ ಇರುವುದಿಲ್ಲ ಎಂದು ವಿವರಿಸಿದರು.
ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿ, ಜಗತ್ತಿನಲ್ಲಿ ಎಲ್ಲೆಡೆ ಯುದ್ಧದ ಕಾರ್ಮೋಡ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದವರು ಶಾಂತಿಯ ಸಂದೇಶವನ್ನು ಸಾರುತ್ತಿರುವುದು ಶ್ಲಾಘನೀಯ. ಶಾಂತಿ-ಸಹಬಾಳ್ವೆ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯ. ದ್ವೇಷವನ್ನು ಮರೆತು ಶಾಂತಿ ಮಾರ್ಗವನ್ನು ಅನುಸರಿಸಿದರೆ ವಿಶ್ವಶಾಂತಿ ಮೂಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಮಹಾಶಿವರಾತ್ರಿಯಿಂದ ಅಧ್ಯಾತ್ಮದ ಯಾನ ಶುರುವಾಗುತ್ತದೆ. ಇದರ ಮೂಲಕ ಅಂತರಂಗದ ಜಾಗೃತಿ, ಸತ್ಯಾನ್ವೇಷಣೆ ಆರಂಭವಾಗುತ್ತದೆ. ನಮ್ಮೊಳಗಿನ ಶಾಂತಿಯನ್ನು ಹುಡುಕಿ ಆತ್ಮದ ಸ್ವರೂಪವನ್ನು ತಿಳಿಯುತ್ತೇವೆ. ಎಲ್ಲದಕ್ಕೂ ಬುನಾದಿ ಮಹಾ ಶಿವರಾತ್ರಿ. ನಮ್ಮೊಳಗಿನ ಶಾಂತಿಯನ್ನು ಹೇಗೆ ಹುಡುಕಿಕೊಳ್ಳಬೇಕು. ಜೀವನದ ರಹಸ್ಯ ಏನು, ಜೀವನದ ಯಾನ ಎಲ್ಲಿಗೆ ತಲುಪಬೇಕೆಂಬುದನ್ನು ಹೇಳಿಕೊಡುವುದು ಬ್ರಹ್ಮಕುಮಾರಿ ಸಮಾಜದ ಧ್ಯೇಯವಾಗಿದೆ. ಇಲ್ಲಿಂದ ಗೋಚರವಾಗುವ ಬೆಳಕು ಯಾವಾಗಲೂ ಶಾಶ್ವತವಾಗಿರಲಿ ಎಂದರು.
ಸಂಸ್ಥೆಯ ಮುಖ್ಯಸ್ಥೆ ಶಾರದಾ, ರಾಧಾ, ಸರೋಜಾ, ಸುನಂದಾ, ವಿಜಯಲಕ್ಷ್ಮೀ ಹಾಜರಿದ್ದರು.