ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯಾಧ್ಯಕ್ಷ ಬಿ.ಬಸವರಾಜು ಮಾತನಾಡಿದರು. 
ಮಂಡ್ಯ

ಫೆ.13ರಿಂದ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಧಾರ್ಮಿಕ ಕೈಂಕರ್ಯ: ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯಾಧ್ಯಕ್ಷ ಬಿ.ಬಸವರಾಜು ಮಾಹಿತಿ

ಪ್ರಮುಖ ಮುಖ್ಯಾಂಶಗಳು

  • ಫೆ.13ರಿಂದ 18ರವರೆಗೆ ಉತ್ಸವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
  • ವಿಜೇತ ರಾಸುಗಳಿಗೆ ಬಹುಮಾನ ವಿತರಣೆ
ಮಂಡ್ಯ: ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ವತಿಯಿಂದ ಮದ್ದೂರು ತಾಲೂಕಿನ ಹನುಮಂತನಗರದ ಆತ್ಮಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಫೆ.13ರಿಂದ 18ರವರೆಗೆ ಉತ್ಸವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ರಥೋತ್ಸವ, ತೆಪ್ಪೋತ್ಸವ, ಶಯನೋತ್ಸವ ಮತ್ತು ಭಾರೀ ದನಗಳ ಜಾತ್ರೆ ನಡೆಯಲಿದೆ ಎಂದು ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯಾಧ್ಯಕ್ಷ ಬಿ.ಬಸವರಾಜು ತಿಳಿಸಿದರು.
ಕಳೆದ 33 ವರ್ಷದಿಂದ ಶಿವರಾತ್ರಿ ಉತ್ಸವಗಳು ಹಾಗೂ ರಥೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ಬಾರಿಯೂ 6 ದಿನ ವಿವಿಧ ಧಾರ್ಮಿಕ ಕೈಂಕರ್ಯವಿರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
13ಕ್ಕೆ ಧ್ವಜಾರೋಹಣ, ಮಹಾಮಂಗಳಾರತಿ ಮಹಾಗಣಪತಿ ಪೂಜೆ, ಹೋಮ, ಲಘು ಪುರ್ಣಾಹುತಿ ದಿಬ್ಬಲಿ, ಮಹಾಮಂಗಳಾರತಿ, 14ಕ್ಕೆ ನಿತ್ಯಪೂಜೆ, ನವಗ್ರಹ ಮೃತ್ಯುಂಜಯ ಮತ್ತು ಶಾಂತಿಹೋಮ, ಮಹಾಮಂಗಳಾರತಿ, 15ಕ್ಕೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಜಾಗರಣೆ, ವಿಶೇಷ ಅಭಿಷೇಕ, ಹರಿಕಥೆ, ಕೋಲಾಟ, ಭಜನೆ, ಭರತನಾಟ್ಯ, ಪ್ರವಚನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ನೃತ್ಯರೂಪಕ, ಡೊಳ್ಳುಕುಣಿತ, ಧಾರ್ಮಿಕ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿವೆ ಎಂದು ಹೇಳಿದರು.
16ಕ್ಕೆ ವಿಶೇಷ ಪೂಜಾಲಂಕಾರದೊಂದಿಗೆ ಅಭಿಷೇಕ, 17ಕ್ಕೆ ಮಧ್ಯಾಹ್ನ 12.10ಕ್ಕೆ ರಥೋತ್ಸವ, ವಿವಿಧ ದೇವರ ಉತ್ಸವ, ಕೀಲುಕುದುರೆ, ಗಾರುಡಿ ಬೊಂಬೆ, ಡೊಳ್ಳುಕುಣಿತ ಕಾರ್ಯಕ್ರಮಗಳು ಜರುಗಲಿದೆ. ಸಂಜೆ ಭಾರತೀ ಎಜುಕೇಷನ್ ಟ್ರಸ್ಟ್ ಹಾಗೂ ಮದ್ದೂರು ಎಪಿಎಂಸಿಯಿಂದ ಪಶುವೈದ್ಯಕೀಯ ನಿರ್ದೇಶಕರಿಂದ ನೇಮಿಸಲ್ಪಟ್ಟ ವೈದ್ಯಾಧಿಕಾರಿಗಳು ಆಯ್ಕೆ ಮಾಡುವ ವಿಜೇತ ರಾಸುಗಳಿಗೆ ಬಹುಮಾನ ನೀಡಲಾಗುವುದು. 18ಕ್ಕೆ ಸಂಜೆ 6.30 ರಿಂದ ತೆಪ್ಪೋತ್ಸವ ಹಾಗೂ ರಾತ್ರಿ 8 ಗಂಟೆಯಿಂದ ಶಯನೋತ್ಸವ, ಧಾರ್ಮಿಕ ಕಾರ್ಯಕ್ರಮ ಇರಲಿದೆ ಎಂದು ವಿವರಿಸಿದರು.
ಕಾರ್ಯದರ್ಶಿ ಸಿದ್ದೇಗೌಡ, ಸ್ನಾತಕೋತ್ತರ ವಿಭಾಗದ ನಿರ್ದೇಶಕ ಎಸ್.ನಾಗರಾಜು, ಉಪನ್ಯಾಸಕ ಶಿವಲಿಂಗೇಗೌಡ ಇತರರಿದ್ದರು.