ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಟಿ.ಟಿ.ಅನುಸೂಯ ಹೊಂಬಾಳೆ ಮತ್ತು ಕೆ.ಪಿ.ಅರುಣಾಕುಮಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  
ಮಂಡ್ಯ

ರಾಣಿ ಕೆಂಪನಂಜಮ್ಮಣ್ಣಿ ಕೊಡುಗೆ ಮರೆಯಲಾಗದು: ಯುವ ಸಾಹಿತಿ ಎಚ್.ಆರ್.ಕನ್ನಿಕಾ ಶ್ಲಾಘನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
  • ಜೈ ಕರ್ನಾಟಕ ಪರಿಷತ್ ಜಿಲ್ಲಾ ಶಾಖೆ ವತಿಯಿಂದ ಆಯೋಜನೆ
ಮಂಡ್ಯ: ಮೈಸೂರು ಮಹಾಸಂಸ್ಥಾನದ ಅತ್ಯಂತ ದಕ್ಷ ಮತ್ತು ದೂರದೃಷ್ಟಿಯ ರಾಣಿ ಕೆಂಪನಂಜಮ್ಮಣ್ಣಿ ಅವರ ತ್ಯಾಗ ಕೊಡುಗೆ ಅಪಾರ ಎಂದು ಯುವ ಸಾಹಿತಿ ಎಚ್.ಆರ್.ಕನ್ನಿಕಾ ಅಭಿಪ್ರಾಯಪಟ್ಟರು.
ಇಲ್ಲಿನ ಅಶೋಕನಗರದಲ್ಲಿನ ಜೈ ಕರ್ನಾಟಕ ಸಭಾಂಗಣದಲ್ಲಿ ಜೈ ಕರ್ನಾಟಕ ಪರಿಷತ್ ಜಿಲ್ಲಾ ಶಾಖೆ ವತಿಯಿಂದ ಮೈಸೂರು ಮಹಾಸಂಸ್ಥಾನದ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ 160ನೇ ಜಯಂತ್ಯುತ್ಸವದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಆಂಗ್ಲ, ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಅಪಾರ ಶಿಕ್ಷಣ ಪಡೆದಿದ್ದರು. ದೂರದೃಷ್ಠಿಯ ರಾಜ್ಯಾಡಳಿತಕ್ಕೆ ಬುನಾದಿ ಹಾಕಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನಪರ-ಜನಪ್ರಿಯ ಆಡಳಿತಕ್ಕೆ ಆಸರೆಯಾದರು ಎಂದು ಸ್ಮರಿಸಿದರು.
ಶಿಕ್ಷಣಕ್ಕಾಗಿ ಬೆಂಗಳೂರಿನಲ್ಲಿ 372 ಎಕರೆ ಭೂಮಿ ಮತ್ತು ಅಪಾರ ಧನಸಹಾಯವನ್ನು ನೀಡಿದರು. ಇವರ ಕಾಲದಲ್ಲಿ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಕೆಆರ್‌ಎಸ್ ಅಣೆಕಟ್ಟೆ ಕಟ್ಟುವಾಗ ಆರ್ಥಿಕ ಸಮಸ್ಯೆ ನೀಗಿಸಲು ತಮ್ಮ ಬಳಿ ಇದ್ದ ಚಿನ್ನಾಭರಣ ಮಾರಿ ಡ್ಯಾಂ ಪೂರ್ಣಗೊಳಿಸಲು ನೆರವಾದದ್ದನ್ನು ಎಂದಿಗೂ ಮರೆಯಲಾಗದು ಎಂದು ತಿಳಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ಕೆಂಪನಂಜಮ್ಮಣ್ಣಿ ಅವರ ಕಾಲದಲ್ಲಿಯೇ ಚಿತ್ರದುರ್ಗದ ವಾಣಿ ವಿಲಾಸ ಸಾಗರ (ಮಾರಿ ಕಣಿವೆ) ಅಣೆಕಟ್ಟು ನಿರ್ಮಾಣಗೊಂಡಿತು. ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಜತೆಗೆ ಮೈಸೂರಿನಲ್ಲಿ ಕ್ಷಯರೋಗ ಆಸ್ಪತ್ರೆ ಸ್ಥಾಪನೆಗೆ ಕಾರಣರಾದರು. ವಿದ್ಯುತ್ ಯೋಜನೆಯಿಂದ ಮಂಡ್ಯ ಇಂಡಿಯಾಕ್ಕೆ ಪರಿಚಯವಾಯಿತು. ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆ ಶಿವನಸಮುದ್ರ ಇವರ ಕಾಲದಲ್ಲಿಯೇ ಕಾರ್ಯರೂಪಕ್ಕೆ ಬಂದಿತು ಎಂದು ಹೇಳಿದರು.
ಜೈ ಕರ್ನಾಟಕ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಎಸ್.ನಾರಾಯಣ್ ಮಾತನಾಡಿ, ಮಹಿಳೆಯರು ತಾಯಿಯಾಗಬಹುದು. ಮಹಾತಾಯಿಯಾಗಲು ತ್ಯಾಗ ಮತ್ತು ದೂರದೃಷ್ಠಿಯ ನಾಯಕತ್ವ ಬೇಕು. ಅಂತಹ ಸಾಧನೆಯನ್ನು ಕೆಂಪನಂಜಮ್ಮಣ್ಣಿ ಮಾಡಿದ್ದಾರೆ. ಪರಿಷತ್ ವತಿಯಿಂದ ಇದೇ ಮೊದಲ ಬಾರಿಗೆ ಅವರ ಜಯಂತಿ ಆಚರಿಸುವ ಜತೆಗೆ ಸಾಧಕಿಯರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸುತ್ತೇವೆ ಎಂದು ತಿಳಿಸಿದರು.
ಕೌಟುಂಬಿಕ ಕಲಹ ಸಲಹೆಗಾರ್ತಿ ನಾಗರತ್ನಾ ಅರಸ್, ಪರಿಷತ್‌ನ ಇಂದಿರಾ ಕಾಲನಿ ಶಾಖೆ ಅಧ್ಯಕ್ಷೆ ತನುಜಾ, ಸವಿತಾ ಜಯರಾಂ ಇತರರಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯೆ ಡಾ.ಟಿ.ಟಿ.ಅನುಸೂಯ ಹೊಂಬಾಳೆ, ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದ ಮುಖ್ಯಸ್ಥೆ ಕೆ.ಪಿ.ಅರುಣಾಕುಮಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.