ಮಂಡ್ಯ ನಗರದ ಜೆ.ಸಿ ವೃತ್ತದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
- ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಆಚರಣೆ
- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ಆಯೋಜನೆ
ಮಂಡ್ಯ: ಹನ್ನೇರಡನೇ ಶತಮಾನದಲ್ಲಿ ಸಾಮಾಜಿಕ ಸಮಾನತೆಯನ್ನು ಸಾರಿದ ಮಾಚಿದೇವರ ತತ್ವ, ಆದರ್ಶ, ಚಿಂತನೆಗಳನ್ನು ಅಳವಡಿಸಿಕೊಂಡು ಮುಂದಿನ ತಲೆಮಾರಿಗೂ ಪರಿಚಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಆಯೋಜಿಸಿದ್ದ ವಚನ ಸಂರಕ್ಷಕ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಅರಸ ಮೇಲಲ್ಲ ಮತ್ತು ಅಗಸ ಕೀಳಲ್ಲ ಎಂಬ ಸಂದೇಶವನ್ನು ನೀಡುವುದರ ಮೂಲಕ ಮಾಚಿದೇವರು ಕಾಯಕ ಸಮಾನತೆಯನ್ನು ಸಾರಿದ್ದಾರೆ. ವೃತ್ತಿಯಿಂದ ಯಾವುದೇ ವ್ಯಕ್ತಿ ಮೇಲಾಗಲು ಅಥವಾ ಕೀಳಾಗಲು ಸಾಧ್ಯವಿಲ್ಲ ಎಂಬುದನ್ನು ವಚನ ಸಾಹಿತ್ಯದ ಮೂಲಕ ತಿಳಿಸಿದ್ದಾರೆ ಎಂದು ಬಣ್ಣಿಸಿದರು.
ಸಾಮಾಜಿಕ ಮತ್ತು ಧಾರ್ಮಿಕವಾಗಿ ಪರಿವರ್ತನೆಯನ್ನು ಉಂಟುಮಾಡಿದ 12ನೇ ಶತಮಾನದಲ್ಲಿ ಕಾಯಕದ ಮೂಲಕವೇ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದವರು ಮಾಚಿದೇವರು ಎಂದ ಅವರು, ಮಾಚಿದೇವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ವಚನದ ಸಾರವನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮಾತನಾಡಿ, ಜಾತಿ ಮತ್ತು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಿ ಕಾಯಕ ಸಮಾನತೆಯನ್ನು ಉಂಟುಮಾಡುವಲ್ಲಿ 12ನೇ ಶತಮಾನದ ಶರಣರ ಪಾತ್ರ ಮಹತ್ವವಾದದ್ದು. ಅದರಲ್ಲೂ ವಿಶೇಷವಾಗಿ ಮಾಚಿದೇವರು ವಚನಗಳನ್ನು ಸಂರಕ್ಷಣೆ ಮಾಡುವ ಮೂಲಕ ತಮ್ಮ ಪೌರುಷವನ್ನು ಪ್ರದರ್ಶಿಸಿದ್ದಾರೆ ಎಂದರು.
ಡಿ.ದೇವರಾಜ ಅಸರು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಯಾವುದೇ ಶರಣರು ಜಾತಿಗೆ ಸೀಮಿತವಾಗಬಾರದು. ಅವರ ವಿಚಾರ ಚಿಂತನೆಗಳು ಸಾರ್ವತ್ರೀಕರಣಗೊಳ್ಳಬೇಕು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು ಎಂಬ ಮೂಲ ಉದ್ದೇಶದಿಂದ ಮಾಚಿದೇವರ ಕಾರ್ಯಕ್ರಮವನ್ನು ಬಹಿರಂಗವಾಗಿ ಆಚರಿಸಲಾಗುತ್ತಿದೆ. ಮಾಚಿದೇವರು ವಚನ ಸಂರಕ್ಷಣೆಯ ಸಂದರ್ಭದಲ್ಲಿ ವೀರಾವೇಶದಿಂದ ಹೋರಾಟ ಮಾಡಿದ ಮಹಾನ್ ಹೋರಾಟಗಾರ ಎಂದು ಬಣ್ಣಿಸಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ವಿವಿಧ ಸಂಘಟನೆಗಳ ಮುಖಂಡರಾದ ಎಚ್.ಡಿ.ಜಯರಾಂ, ಎಂ.ಕೃಷ್ಣ, ಮಾ.ಸೋ.ಚಿದಂಬರ್, ಡಿ. ರಮೇಶ್, ಎಂ.ವಿನಯ್‌ಕುಮಾರ್, ಬಿ.ಲಿಂಗಯ್ಯ, ಬಿ.ಟಿ.ಗುರುರಾಜ್, ಜಯರಾಮು, ರಾಜಣ್ಣ, ದಾಸಪ್ಪ, ನಾರಾಯಣಸ್ವಾಮಿ, ಶಿವಕುಮಾರ್ ಆರಾಧ್ಯ, ಮಹಂತಪ್ಪ, ಸಂತೆಕಸಲಗೆರೆ ಬಸವರಾಜು, ಹನಿಯಂಬಾಡಿ ಶೇಖರ್, ಅನುಪಮಾ, ಕಲಾವಿದ ಪ್ರಕಾಶ್, ಗೊರವಾಲೆ ಶಿವಣ್ಣ, ಎಂ.ಬಿ. ರಮೇಶ, ವಿರೂಪಾಕ್ಷ ಇತರರಿದ್ದರು. ಇದೇ ವೇಳೆ ಮಾಚಿದೇವರ ಚಿತ್ರದೆದುರು ದೀಪಟಿಗೆ ಪೂಜೆ, ಪಂಜಿನ ಸೇವೆ ಬಳಿಕ ಅನ್ನ ದಾಸೋಹ ನಡೆಯಿತು.