ಮಂಡ್ಯದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿಯನ್ನು ಎಎಸ್ಪಿ ಎಸ್.ಇ.ಗಂಗಾಧರಸ್ವಾಮಿ ಉದ್ಘಾಟಿಸಿದರು. 
ಮಂಡ್ಯ

ಜೀವನದಲ್ಲಿ ಮಾಚಿದೇವರ ಸಂದೇಶ ಅಳವಡಿಸಿಕೊಳ್ಳಿ: ಎಎಸ್ಪಿ ಎಸ್.ಇ.ಗಂಗಾಧರಸ್ವಾಮಿ ಸಲಹೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಮಡಿವಾಳ ಮಾಚಿದೇವ ಜಯಂತ್ಯುತ್ಸವ
  • ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜನೆ
  • ಎಎಸ್ಪಿ ಗಂಗಾಧರಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗಿ
ಮಂಡ್ಯ: ಕೆಲಸ ಯಾವುದೇ ಆದರೂ ಸರಿ ಎಲ್ಲರೂ ಶಿಕ್ಷಣ ಪಡೆಯುವುದು ಕಡ್ಡಾಯವಾಗಿರಬೇಕು. ಇದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅಂತೆಯೇ ಮಡಿವಾಳ ಮಾಚಿದೇವರ ಸಂದೇಶವನ್ನು ತಮ್ಮ ಜೀವನದಲ್ಲಿ ಅನುಸರಿಸಬೇಕು ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಾವು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ಯುವ ಪೀಳಿಗೆ ಎಚ್ಚೆತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲಬೇಕು. ಯುವ ಜನತೆ ಮಡಿವಾಳ ಮಾಚಿದೇವ ಅವರ ಆದರ್ಶ, ಮೌಲ್ಯಗಳನ್ನು ಪಾಲಿಸಬೇಕು ಎಂದು ಹೇಳಿದರು.
ಕನ್ನಡ ಉಪನ್ಯಾಸಕ ಸಬ್ಬನಹಳ್ಳಿ ನಾಗರಾಜು ಮಾತನಾಡಿ, 12ನೇ ಶತಮಾನದಲ್ಲಿ ಕಾಯಕವೇ ಕೈಲಾಸ ಎಂಬ ಭಾವನೆಯನ್ನು ಸಮಾಜಕ್ಕೆ ಸಾರಿದ ಕಾಲಘಟ್ಟದಲ್ಲಿ ಅನುಭವ ಮಂಟಪದಲ್ಲಿ 35 ಮಹಿಳೆಯರು ಸೇರಿದಂತೆ 250 ಶರಣರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ರಾಜರ ಆಡಳಿತ ಕಾಲದಲ್ಲಿ ಸಮ ಸಮಾಜದ ನಿರ್ಮಾಣ ಮಾಡುವಲ್ಲಿ ಶರಣರ ಪಾತ್ರ ಅಪಾರ ಎಂದು ಮಡಿವಾಳ ಮಾಚಿದೇವರ ಕುರಿತು ಮಾಹಿತಿ ನೀಡಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಮಾತನಾಡಿ. ಸಮಾಜದ ಅಶುಚಿತ್ವವನ್ನು ಶುಚಿಗೊಳಿಸುವ ಕಾಯಕ ಮಾಡುವ ಮಡಿವಾಳ ಸಮುದಾಯದ ವರ್ಗದವರು ಶಿಕ್ಷಣವನ್ನು ಪಡೆಯುವ ಮೂಲಕ ಸಾಮಾಜಿಕ, ಆರ್ಥಿಕವಾಗಿ ಸಬಲರಾಗಬೇಕು. ಜತೆಗೆ ಮಡಿವಾಳ ಮಾಚಿದೇವರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಡಿ.ರಮೇಶ್, ವೆಂಕಟೇಶ್, ಕಾಂತರಾಜು, ಸೋಮಶೇಖರ್, ಸಿದ್ದಶೆಟ್ಟಿ, ಜಯರಾಮು, ಹನುಮಂತು, ಮೋಹನ್, ರವಿ ಇತರರಿದ್ದರು.