ತೊರೆಬೊಮ್ಮನಹಳ್ಳಿಯಲ್ಲಿ ಶಾಸಕ ಕದಲೂರು ಉದಯ್ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಿದರು. 
ಮಂಡ್ಯ

ಗೃಹಲಕ್ಷ್ಮಿ ಯೋಜನೆ ಅಪಹಾಸ್ಯ ಬೇಡ

ಕೆ.ಎಂ.ದೊಡ್ಡಿ: ಗೃಹಲಕ್ಷ್ಮಿ ಯೋಜನೆಯಿಂದ ಗೃಹಿಣಿಯರ ಬದುಕು ಹಸನಾಗುತ್ತಿದ್ದು ಕೆಲವರು ಯೋಜನೆಯ ಬಗ್ಗೆ ಅಪಹಾಸ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಶಾಸಕ ಕದಲೂರು ಉದಯ್ ಕಿಡಿ ಕಾರಿದರು.
ಸಮೀಪದ ತೊರೆಬೊಮ್ಮನಹಳ್ಳಿ ಗ್ರಾಮದಲ್ಲಿ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ತೊರೆಬೊಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪಶು ಕ್ರಾಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗೃಹಲಕ್ಷ್ಮಿ ಯೋಜನೆಯಿಂದ ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ.ಹಣವನ್ನು ಸರ್ಕಾರ ನೀಡುತ್ತಿದೆ. ಕೆಲವರು ಯೋಜನೆಯ ಬಗ್ಗೆ ಕೇವಲವಾಗಿ ಮಾತುನಾಡುತ್ತಾರೆ. ಅದರ ಮಹತ್ವ ತಿಳಿಯದೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ ಎಂದರು.
ಗ್ರಾಮೀಣ ಭಾಗದಲ್ಲಿನ ರೈತರು ಬಹುಮುಖ್ಯವಾಗಿ ತೊಡಗಿಸಿಕೊಂಡಿರುವ ಹೈನುಗಾರಿಕೆಯನ್ನು ಉತ್ತೇಜಿಸಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿ ರೈತರಿಗೆ ಸವಲತ್ತುಗಳನ್ನು ನೀಡಿ ಪ್ರ್ರೋತ್ಸಾಹಿಸುತ್ತಿದೆ. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು. ರೈತರು ಯಾಂತ್ರಿಕ ಪದ್ಧತಿ ಬೇಸಾಯ ಅಳವಡಿಸಿಕೊಳ್ಳಬೇಕು. ಪಶು ಇಲಾಖೆಯಿಂದ ಹೈನುಗಾರಿಕೆ ಮಾಡುವ ರೈತರಿಗೆ ಉಚಿತವಾಗಿ ಮ್ಯಾಟ್‌ಗಳು, ಹುಲ್ಲು ಕಟಾವು ಮಾಡುವ ಯಂತ್ರಗಳನ್ನು ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು ಮಾತನಾಡಿ, ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಒಟ್ಟು 9 ರೂ. ಪ್ರೋತ್ಸಾಹ ಧನ ನೀಡಿ ಹೈನುಗಾರರ ಕಲ್ಯಾಣಕ್ಕೆ ಮುಂದಾಗಿದೆ ಎಂದರು.
ಈ ಸಂದರ್ಭ ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಲಾಯಿತು. ಕೃಷಿ ಇಲಾಖೆಯಿಂದ ಆಯ್ಕೆಗೊಂಡಿದ್ದ ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರಗಳನ್ನು ಶಾಸಕ ಕೆ.ಎಂ.ಉದಯ್ ವಿತರಿಸಿದರು. ಆರ್ಥಿಕ ಸಂಕಷ್ಟದಲ್ಲಿದ್ದ ಮಹಿಳೆಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಧನ ಸಹಾಯ ನೀಡಲಾಯಿತು.
ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಕಾಂಗ್ರೆಸ್ ಮುಖಂಡ ಟಿ.ಬಿ.ಹಳ್ಳಿ ವೆಂಕಟೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ಎಂ.ಶ್ರೀಕಂಠೇಗೌಡ, ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಡಿ.ಆರ್. ಮಂಜೇಶ್, ಉಪ ವ್ಯವಸ್ಥಾಪಕಿ ರತ್ನಮ್ಮ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ್, ಕೃಷಿ ಅಧಿಕಾರಿ ಭವಾನಿ, ಕಿರಣ್, ಬ್ಲಾಕ್ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಕೆಡಿಪಿ ಸಮಿತಿ ಸದಸ್ಯ ಅಭಿಷೇಕ್ ಗೌಡ, ರಾಜೇಂದ್ರ, ಹೊನ್ನೇಗೌಡ, ಬಾಲು ಉಪಸ್ಥಿತರಿದ್ದರು.