ಮದ್ದೂರು ನಗರದಲ್ಲಿರುವ ಪುರಾಣ ಪ್ರಸಿದ್ಧ ಶಕ್ತಿ ದೇವತೆ ಶ್ರೀ ಮದ್ದೂರಮ್ಮನವರ ಕೊಂಡೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. 
ಮಂಡ್ಯ

ಮದ್ದೂರಮ್ಮನವರ ಅದ್ದೂರಿ ಕೊಂಡೋತ್ಸವ

ಲೋಕೇಶ್ ಮನು. ಡಿ
ಮದ್ದೂರು: ನಗರದಲ್ಲಿರುವ ಪುರಾಣ ಪ್ರಸಿದ್ಧ ಶಕ್ತಿ ದೇವತೆ ಶ್ರೀ ಮದ್ದೂರಮ್ಮನವರ ಕೊಂಡೋತ್ಸವ ಬುಧವಾರ ಬೆಳಗ್ಗೆ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿತು.
ದೇಗುಲದ ಆವರಣದಲ್ಲಿ ನಡೆದ ಕೊಂಡೋತ್ಸವ ಹಿನ್ನೆಲೆಯಲ್ಲಿ ಅರ್ಚಕ ಶಿವಣ್ಣ ಕೊಂಡ ಹಾಯ್ದಗ ಸಾವಿರಾರು ಭಕ್ತಾದಿಗಳ ಉದ್ಘೋಷ ಮುಗಿಲು ಮುಟ್ಟಿತ್ತು. ಕೊಂಡೋತ್ಸವಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಸಂಖ್ಯಾತ ಭಕ್ತಾದಿಗಳು ಆಗಮಿಸಿದ್ದರು.
ಕೊಂಡೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ 10.30 ಗಂಟೆಗೆ ಶ್ರೀ ಮದ್ದೂರಮ್ಮ ಮಠಮನೆ ದೇವಸ್ಥಾನದಲ್ಲಿ ಹೋಮ, ಹವನ ಕಾರ್ಯ, ಮಧ್ಯಾಹ್ನ ಶ್ರೀ ಎಲ್ಲಮ್ಮ ದೇವಿಯರಿಗೆ ಚಂದ್ರ ಭಂಡಾರ ಸೇವೆ ಸಲ್ಲಿಸಲಾಯಿತು. ಸಂಜೆ 4 ಗಂಟೆಗೆ ಗ್ರಾಮಸ್ಥರಿಂದ ಕೊಂಡ ಬಂಡಿ ಉತ್ಸವ ಪ್ರಮುಖ ಬೀದಿಯಲ್ಲಿ ನಡೆಯಿತು. ಸಂಜೆ 6.30 ಕ್ಕೆ ಶ್ರೀ ಮದ್ದೂರಮ್ಮನವರ ಮೂಲ ದೇವಸ್ಥಾನದಲ್ಲಿ ಅಭಿಷೇಕ ಮತ್ತು ಹೋಮ-ಹವನ ಹಾಗೂ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ರಾತ್ರಿ 11.30 ಗಂಟೆಗೆ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಿ ಪೂಜೆ ಮಾಡಲಾಯಿತು. ರಾತ್ರಿ 1 ಗಂಟೆಗೆ ಮಠಮನೆಯಿಂದ ಮಂಗಳ ವಾದ್ಯದೊಂದಿಗೆ ಶಿಂಷಾ ನದಿಗೆ ಹೋಗಿ, ನದಿಯ ದಡದಲ್ಲಿ ಶ್ರೀ ಮದ್ದೂರಮ್ಮನವರಿಗೆ ನೂರೊಂದು ಚಂದ್ರ ಭಂಡಾರ, ಎಡೆಪೂಜೆ, ಹೂ ಹೊಂಬಾಳೆ ಪೂಜೆ, ಕರಗ ಪೂಜೆ ಮಾಡಿಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಮಠಮನೆ ತಲುಪಿತು.
ಬುಧವಾರ ಬೆಳಗ್ಗೆ ಮದ್ದೂರಮ್ಮ ದೇವಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಆಗಮಿಸಿದಾಗ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ನಂತರ ಬೆಳಗ್ಗೆ ಮೂಲ ನಕ್ಷತ್ರ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಶ್ರೀ ಮದ್ದೂರಮ್ಮನ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಂಜೆ 4.30ಕ್ಕೆ ಹೆಣ್ಣು ಮಕ್ಕಳಿಂದ ಶ್ರೀ ಮದ್ದೂರಮ್ಮನವರಿಗೆ ಹಾಲರವಿ ಸೇವೆ ನಡೆಯಿತು.
ಗುರುವಾರ ಸಂಜೆ 4 ಗಂಟೆಗೆ ಮಠಮನೆಯಿಂದ ಭಕ್ತರಿಂದ ಬಾಯಿ ಬೀಗ ಸಮೇತ ಶ್ರೀ ಸಿಡಿರಣ್ಣ ಉತ್ಸವ ಅದ್ದೂರಿಯಾಗಿ ನೆರವೇರಲಿದೆ. ಹರಕೆ ಹೊತ್ತ ಭಕ್ತಾದಿಗಳು ತಮ್ಮ ಮಕ್ಕಳನ್ನು ಈ ಕಾಗಡಿಯಲ್ಲಿ ಕೂರಿಸಿ ಸುತ್ತಿಸುತ್ತಾರೆ. ಹೀಗೆ ಮಾಡಿದರೆ, ಮಕ್ಕಳಿಗೆ ಯಾವುದೇ ಕಾಯಿಲೆ ಬರುವುದಿಲ್ಲ ಎಂಬ ನಂಬಿಕೆ. ಇದಲ್ಲದೇ, ನವ ದಂಪತಿಗಳು ಈ ಉತ್ಸವದಲ್ಲಿ ಪಾಲ್ಗೊಂಡು ಸಿಡಿರಾಯಣ್ಣನಿಗೆ ಹಣ್ಣು-ದವನ ಎಸೆದು ಹರಕೆ ಸಲ್ಲಿಸುವುದು, ಬಾಯಿ ಬೀಗ ಹರಕೆ ಸಲ್ಲಿಸುವುದು ವಾಡಿಕೆ.
ಶುಕ್ರವಾರ ಸಂಜೆ 4 ಗಂಟೆಗೆ ಶ್ರೀ ಮದ್ದೂರಮ್ಮನರಿಗೆ ಓಕುಳಿ ಸೇವೆ, ಸಂಜೆ 6.30ಕ್ಕೆ ಉಯ್ಯಲೆ ಉತ್ಸವ, ರಾತ್ರಿ 9 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ಹೂವಿನ ವ್ಯಾಪಾರಸ್ಥರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
ಶನಿವಾರ ಸಂಜೆ 4 ಗಂಟೆಗೆ ಮದ್ದೂರಮ್ಮನವರಿಗೆ ಎಣ್ಣೆ ಮಜ್ಜನ ಸೇವೆ, ಪುಷ್ಪಾಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ರಾತ್ರಿ 9 ಗಂಟೆಗೆ ಮೂಲ ದೇವಸ್ಥಾನದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಮಠ ಮನೆ ತಲುಪುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.