ಮದ್ದೂರಿನಲ್ಲಿ ಆಯೋಜಿಸಿದ್ದ ಬೃಹತ್ ಮ್ಯಾರಥಾನ್(ಕಾಲ್ನಡಿಗೆ)ಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು. ಕೆ.ಎಂ.ಉದಯ್, ದಿನೇಶ್‌ಗೂಳಿಗೌಡ, ಶೋಭಾರಾಣಿ, ಸಿ.ಡಿ.ಗಂಗಾಧರ್, ಚಲುವರಾಜು ಇದ್ದರು. 
ಮಂಡ್ಯ

ಮದ್ದೂರು ಉತ್ಸವ ಅದ್ದೂರಿ ಆಚರಣೆಗೆ ಮುನ್ನುಡಿ

ಪ್ರಮುಖ ಮುಖ್ಯಾಂಶಗಳು

  • ಶಿವಪುರ ಸತ್ಯಾಗ್ರಹ ಸೌಧದವರಿಗೆ ಮೂರು ಕಿ.ಮೀ. ಮ್ಯಾರಥಾನ್
  • ಶಾಸಕ ಕೆ.ಎಂ.ಉದಯ್ ಚಾಲನೆ
ಮದ್ದೂರು: ಇತಿಹಾಸದಲ್ಲೇ ಪ್ರಥಮ ಬಾರಿಗೆ ಮದ್ದೂರಿನಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮದ್ದೂರು ಉತ್ಸವ-2026 ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಬಳಿ ಶನಿವಾರ ಮದ್ದೂರು ಉತ್ಸವದ ಪ್ರಾರಂಭೋತ್ಸವದ ಅಂಗವಾಗಿ ಪ್ರವಾಸಿ ಮಂದಿರದಿಂದ ಸತ್ಯಾಗ್ರಹಸೌಧವರಿಗೆ ಸುಮಾರು 3 ಕಿ.ಮೀ. ದೂರ ಆಯೋಜಿಸಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.
ಮದ್ದೂರು ಇತಿಹಾಸದ ಪುಟಗಳಲ್ಲಿ, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ರೀತಿಯಲ್ಲಿ ಮದ್ದೂರು ಉತ್ಸವವನ್ನು ವ್ಯವಸ್ಥಿತವಾಗಿ ಆಚರಿಸುವ ಉದ್ದೇಶದಿಂದ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜನರು ಅಗತ್ಯ ಸಹಕಾರ ನೀಡಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಮದ್ದೂರು ಉತ್ಸವ ಏ.25ರಿಂದ ಮೇ 6ವರೆಗೆ ನಡೆಯಲಿದೆ. ಏ.25ರಿಂದ ಏ.30ರವರೆಗೆ ರಾಸುಗಳ ಜಾತ್ರೆ ನಡೆಯಲಿದೆ. ಉತ್ತಮ ರಾಸುಗಳನ್ನು ಚಾಂಪಿಯನ್ ಎಂದು ಘೋಷಿಸಿ, ಮೊದಲ ಚಾಂಪಿಯನ್‌ಗೆ 2 ಲಕ್ಷ ರೂ., ಎರಡನೇ ಚಾಂಪಿಯನ್‌ಗೆ 1 ಲಕ್ಷ ರೂ., ಮೂರನೇ ಚಾಂಪಿಯನ್‌ಗೆ 50 ಸಾವಿರ ರೂ.ನಗದು ಬಹುಮಾನ ಕೊಡಲಾಗುವುದು. 10 ರಾಸುಗಳಿಗೆ 10 ಸಾವಿರ ರೂ.ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ಮೊದಲ ಬಾರಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳುವ ಟಗರುಗಳಿಗೂ ಕ್ರಮವಾಗಿ 10 ಸಾವಿರ ಹಾಗೂ 5 ಸಾವಿರ ರೂ.ನಗದು ಬಹುಮಾನ ನೀಡಲಾಗುವುದು. ಬಹುಮಾನ ವಿಜೇತ ರಾಸುಗಳನ್ನು ಏ.30ರಂದು ಮದ್ದೂರು ಪ್ರವಾಸಿ ಮಂದಿರ ಆವರಣದಿಂದ ಶ್ರೀಉಗ್ರನರಸಿಂಹಸ್ವಾಮಿ ದೇವಾಲಯದ ಆವರಣದವರೆಗೆ ಮೆರವಣಿಗೆ ಮೂಲಕ ಕರೆತಂದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 18 ವರ್ಷ ಮೇಲ್ಪಟ್ಟ ಯುವಕ, ಯುವತಿಯರಿಗೆ ಏ.28, 29ರಂದು ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜಿನ ಆವರಣದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ವಿಜೇತ ತಂಡಗಳಿಗೆ ಕ್ರಮವಾಗಿ 50 ಸಾವಿರ ರೂ., 25 ಸಾವಿರ ರೂ., 10 ಸಾವಿರ ರೂ.ನಗದು ಬಹುಮಾನ ನೀಡುವುದರ ಜತೆಗೆ 10 ಸಾವಿರ ರೂ.ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ಮೇ 1ರಿಂದ 4 ರವರೆಗೆ ಮದ್ದೂರು ಪಟ್ಟಣದ ನಿವಾಸಿಗಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆ ಪ್ರತಿ ವಾರ್ಡ್ ಮಟ್ಟದಲ್ಲಿ ನಡೆಯಲಿದ್ದು, ಪ್ರತಿ ವಾರ್ಡ್‌ನಲ್ಲಿ ವಿಜೇತರಾದ ಮಹಿಳೆಯರಿಗೆ ಮಿಕ್ಸಿ, ಕುಕ್ಕರ್, ಬಿಸಿ ನೀರು ಜಗ್ಗು ಬಹುಮಾನವಾಗಿ ನೀಡಲಾಗುವುದು. ವಾರ್ಡ್ ಮಟ್ಟದಲ್ಲಿ ವಿಜೇತರಾದ ಮಹಿಳೆಯರಿಗೆ ಮತ್ತೊಮ್ಮೆ ಸ್ಪರ್ಧೆ ಆಯೋಜಿಸಿ ವಾಷಿಂಗ್ ಮಷಿನ್, ರೆಫ್ರಿಜರೇಟರ್, ಗ್ರೈಂಡರ್ ಹಾಗೂ 10 ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ಮೇ 6ರಂದು ಮದ್ದೂರು ಪಟ್ಟಣದ ಕ್ರೀಡಾಂಗಣದಲ್ಲಿ ಸಂಗೀತ ಸಂಜೆ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಖ್ಯಾತ ಚಲನಚಿತ್ರ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ. ಜತೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
ಸಂಸ್ಕೃತಿ ಉಳಿಸಿ, ಬೆಳೆಸುವುದು ಸರ್ಕಾರದ ಆದ್ಯತೆ
ಮದ್ದೂರು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಸಂಸ್ಕೃತಿ ಉಳಿಸಿ, ಬೆಳೆಸುವುದು ಸರ್ಕಾರದ ಆದ್ಯತೆಯಾಗಿದೆ. ಮದ್ದೂರು ಕೇವಲ ಭೌಗೋಳಿಕ ಗಡಿಯಲ್ಲ, ಇದು ತ್ಯಾಗರಾಜರ ನಾಡು, ಇತಿಹಾಸದ ಪುಟಗಳಲ್ಲಿ ದಾಖಲಾದ ಪುಣ್ಯಭೂಮಿ. ನಮ್ಮ ಜಾನಪದ, ಕಲೆ, ಕೃಷಿ ಸಂಸ್ಕೃತಿಯನ್ನು ಜಗತ್ತಿಗೆ ಸಾರಲು ಇಂತಹ ಉತ್ಸವಗಳು ಸೇತುವೆಯಾಗಬೇಕು ಎಂದರು.
ಮದ್ದೂರು ಉತ್ಸವವನ್ನು ಮುಂದಿನ ವರ್ಷದಿಂದ ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಕಲಾವಿದರಿಗೆ ಶಾಶ್ವತ ವೇದಿಕೆ ನಿರ್ಮಿಸಲು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು. ಮದ್ದೂರು ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ, ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಎಂದರು.
ರೈತರಿಲ್ಲದೆ ಉತ್ಸವವಿಲ್ಲ. ಕೃಷಿ ಮೇಳದ ಮೂಲಕ ನಮ್ಮ ಅನ್ನದಾತರಿಗೆ ಹೊಸ ತಂತ್ರಜ್ಞಾನ ಪರಿಚಯಿಸುತ್ತಿದ್ದೇವೆ. ಯುವಕರು ಕೃಷಿಯತ್ತ ಒಲವು ತೋರಿಸಬೇಕು ಎಂದರು.
ಗೋಪೂಜೆ ಮಾಡಿದ ಸಚಿವ, ಶಾಸಕರು
ಮ್ಯಾರಥಾನ್‌ಗೂ ಮುನ್ನ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ಹಾಗೂ ಅಧಿಕಾರಿಗಳು ಗೋಪೂಜೆ ಮಾಡಿದರು. ಪ್ರವಾಸಿ ಮಂದಿರದಿಂದ ಪಟ್ಟಣದ ಪ್ರಮುಖ ಬೀದಿಗಳ ಶಿವಪುರ ಸತ್ಯಾಗ್ರಹಸೌಧವರೆಗೆ ಶಾಸಕ ಕೆ.ಎಂ.ಉದಯ್, ಎಂಎಲ್ಸಿ ದಿನೇಶ್‌ಗೌಡ ಅವರು ಕಾಲ್ನಡಿಗೆಯಲ್ಲಿ ಆಗಮಿಸಿ ಮ್ಯಾರಥಾನ್‌ಗೆ ಸಾಥ್ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಶಿಕ್ಷಕರು, ಅಧಿಕಾರಿಗಳು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಶಿವಪುರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.
ಜಿ.ಪಂ.ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ನಗರಸಭಾ ಪೌರಾಯುಕ್ತರಾದ ರಾಧಿಕಾ, ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲಾ, ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್ ಇತರರು ಹಾಜರಿದ್ದರು.