ಮದ್ದೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಅದ್ದೂರಿ ಗಣೇಶೋತ್ಸವಕ್ಕೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ವಿನುತಾ ಉದಯ್, ಡಾ.ಕುಮಾರ, ಡಾ.ಶೋಭಾರಾಣಿ, ಅರುಣ್‌ಸಾಗರ್, ಚಲುವರಾಜು, ಕೆ.ಎಂ.ರವಿ, ಸಿಪಾಯಿ ಶ್ರೀನಿವಾಸ್ ಇದ್ದರು. 
ಮಂಡ್ಯ

ಅದ್ದೂರಿ ಗಣೇಶೋತ್ಸವಕ್ಕೆ ಚಾಲನೆ

ಮದ್ದೂರು: ನಗರದ ತಾಲೂಕು ಕ್ರೀಡಾಂಗಣದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಅದ್ದೂರಿ ಗಣೇಶೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಚಲನಚಿತ್ರ ಕಲಾ ನಿರ್ದೇಶಕ ಅರುಣ್ ಸಾಗರ್ ಅವರು ವಿಶೇಷವಾಗಿ ನಿರ್ಮಿಸಿದ್ದ ಬೃಹತ್ ಸೆಟ್‌ನಲ್ಲಿ ಗಣೇಶ ಹಾಗೂ ಗೌರಿ ಮೂರ್ತಿಗಳನ್ನು ಸಂಜೆ ಪ್ರತಿಷ್ಠಾಪಿಸಿ ಆದಿ ಪೂಜಿತನಿಗೆ ಅಗ್ರಪೂಜೆ ನೆರವೇರಿಸಲಾಯಿತು.
ಶಾಸಕ ಕೆ.ಎಂ.ಉದಯ್, ಪತ್ನಿ ವಿನುತಾ ಉದಯ್ ನೇತೃತ್ವದಲ್ಲಿ ಗಣೇಶ ಮೂರ್ತಿಯ ಮುಂದೆ ಹೋಮ, ಹವನ, ನಂತರ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು, ಬಳಿಕ ದೇವರ ದರ್ಶನಕ್ಕಾಗಿ ಬಂದಿದ್ದ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ನಮ್ಮ ಟ್ರಸ್ಟ್ ವತಿಯಂದ ಈ ಬಾರಿಯಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಒಂದು ವಾರ ತನಕ ಅದ್ದೂರಿಯಾಗಿ ಗಣೇಶೋತ್ಸವ ಹಮ್ಮಿಕೊಳ್ಳಲಾಗಿದ್ದು, ಮಂಗಳವಾರದಿಂದ ಕ್ರೀಡಾಂಗಣದಲ್ಲಿ ಸಾಮಾಜಿಕ ನಾಟಕ, ನಗೆಹಬ್ಬ, ಗರ್ಭಿಣಿಯರಿಗೆ ಬಾಗಿನ ಸೇರಿದಂತೆ ಚಲನಚಿತ್ರ ತಾರೆಯರಿಂದ ರಸಮಂಜರಿ ಇನ್ನಿತರ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಸೆ.20ರಂದು ವಿವಿಧ ಜಾನಪದ ಕಲಾಪ್ರಕಾರಗಳೊಂದಿಗೆ ಸಾಮೂಹಿಕ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು.
ಮದ್ದೂರು ತಾಲೂಕು ಸೇರಿದಂತೆ ನಾಡಿನ ಒಳಿತಿಗಾಗಿ ಹಾಗೂ ಉತ್ತಮ ಮಳೆಯಾಗಲೆಂದು ಗಣೇಶೋತ್ಸವವನ್ನು ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದೆ ಎಂದ ಅವರು, ಇದರ ಅಂಗವಾಗಿ ನಗರದಲ್ಲಿ ಪೇಟೆ ಬೀದಿಯಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ ಎಂದರು.
ಗಮನ ಸೆಳೆದ ಶಾಸಕ ದಂಪತಿ: ಗಣೇಶೋತ್ಸವದಲ್ಲಿ ಪ್ರತಿಷ್ಠಾಪನೆ ಅಂಗವಾಗಿ ಭಕ್ತರಿಗೆ ಶಾಸಕ ಕೆ.ಎಂ.ಉದಯ್, ಪತ್ನಿ ವಿನುತಾ ಉದಯ್ ದಂಪತಿ ಪ್ರಸಾದ ವಿತರಣೆ ಮಾಡಿ ಸಾರ್ವಜನಿಕರ ಗಮನ ಸೆಳೆದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೋಭಾರಾಣಿ, ಕಲಾ ನಿರ್ದೇಶಕ ಅರುಣ್‌ಸಾಗರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಲುವರಾಜು, ರಾಜೀವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಟ್ರಸ್ಟ್ ಪದಾಧಿಕಾರಿಗಳಾದ ಕೆ.ಎಂ.ರವಿ, ಸಿಪಾಯಿ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.