ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗದಲ್ಲಿ) ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಬಿಇಒ ಧನಂಜಯ ಉದ್ಘಾಟಿಸಿದರು. ಎಚ್.ಎಲ್.ಸತೀಶ್, ಶಿವರಾಮು, ರವಿ, ಚಂದ್ರಶೇಖರ್, ಬಿ.ವಿ.ಹಳ್ಳಿ ನಾರಾಯಣ್, ವನಿತಾ, ಚೇತನಾ, ರಂಜಿತ ಇದ್ದರು.
ಮದ್ದೂರು: ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣದ ಜತೆಗೆ ಅತ್ಯುತ್ತಮ ಕೌಶಲ ತರಬೇತಿ ಪಡೆದುಕೊಂಡರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಶ್ರೀರಾಣಿ ಐಶ್ವರ್ಯ ಡೆವಲಪರ್ಸ್‌ನ ಮಾಲೀಕ ಎಚ್.ಎಲ್.ಸತೀಶ್ ತಿಳಿಸಿದರು.
ತಾಲೂಕಿನ ಕೆ.ಹೊನ್ನಲಗೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗದಲ್ಲಿ) ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಕೆ.ಹೊನ್ನಲಗೆರೆ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವಿಭಾಗ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಜತೆಗೆ ಒಂದಲ್ಲಾ ಒಂದು ರೀತಿಯ ಕೌಶಲದಲ್ಲಿ ಪರಿಣಿತಿ ಹೊಂದಿದರೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆಯಿದ್ದು, ಅದನ್ನು ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರ ಮತ್ತು ಪಾಲಕರು ಮಾಡಿದರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಸಾಧನೆ ಮಾಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಅಬ್ದುಲ್ ಕಲಾಂ, ಸಿ.ವಿ.ರಾಮನ್ ಸೇರಿದಂತೆ ಹಲವಾರು ಮಹಾನ್ ವ್ಯಕ್ತಿಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಮಹಾನ್ ಸಾಧನೆ ಮಾಡಿದ್ದಾರೆ. ಇದನ್ನರಿತು ಪಾಲಕರು ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಾತಿ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಇಒ ಎಸ್.ಬಿ. ಧನಂಜಯ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ವಿಜ್ಞಾನ ವಸ್ತು ಪ್ರದರ್ಶನ ಪೂರಕವಾಗಿದೆ. ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮತ್ತು ಅದಕ್ಕೆ ಶಿಕ್ಷಕರಿಂದ ಉತ್ತರ ಪಡೆದುಕೊಳ್ಳುವ ಜತೆಗೆ ವಿಜ್ಞಾನ ವಿಷಯದಲ್ಲಿ ಪ್ರಯೋಗ ಮಾಡುವ ಮೂಲಕ ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವ್ಯಕ್ತಿತ್ವ ರೂಪಿಸಿಕೊಂಡಾಗ ಜೀವನದಲ್ಲಿ ಅಂದುಕೊಂಡ ಸಾಧನೆ ಮಾಡಬಹುದು ಎಂದರು.
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳುವ ಜತೆಗೆ, ಕೌಶಲ, ಗಣಿತ ಹಾಗೂ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ದೇಶಕ್ಕೆ, ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಲು ಮುಂದಾಗಬೇಕೆಂದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ 100ಕ್ಕೂ ಹೆಚ್ಚಿನ ವಿವಿಧ ಮಾದರಿಗಳ ಪರೀಕ್ಷೆಗೆ ಪೂರಕವಾದ ವಿಜ್ಞಾನ ಚಿತ್ರಗಳ ಮುಖ್ಯ ಪರಿಕಲ್ಪನೆ, ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ಮಾದರಿಗಳು ಹಾಗೂ ವಿದ್ಯಾರ್ಥಿಗಳೇ ಬಿಡಿಸಿದ್ದ ಬಣ್ಣದ ರಂಗೋಲಿ ನೋಡುಗರ ಗಮನ ಸೆಳೆಯಿತು.
ಎಸ್‌ಡಿಎಂಸಿ ಅಧ್ಯಕ್ಷ ಶಿವರಾಮು, ಇಸಿಒ ರವಿ, ಪ್ರಭಾರ ಉಪ ಪ್ರಾಂಶುಪಾಲ ಸಾಹಿತಿ ಬಿ.ವಿ.ಹಳ್ಳಿ ನಾರಾಯಣ್, ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ್, ವಿಜ್ಞಾನ ಶಿಕ್ಷಕರಾದ ವನಿತಾ, ಚೇತನಾ, ರಂಜಿತಾ, ಸಹ ಶಿಕ್ಷಕರಾದ ರೂಪಾ, ರಶ್ಮಿ, ಅನ್ನಪೂರ್ಣ, ಭವ್ಯಾ, ಮಹಮದ್‌ರಫಿಕ್ ಡಂಬಳ ಇದ್ದರು.