ಮದ್ದೂರು ನಗರದಲ್ಲಿ ಎನ್2ಎನ್ ಎಡಿಡಿಎಸ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಪಾರಂಪರಿಕ ವೈದ್ಯ ಮಂಜುನಾಥ್ ಉದ್ಘಾಟಿಸಿದರು. ಬೆಟ್ಟಯ್ಯ, ಭೈರವ, ಕೆ.ಆರ್.ರಮ್ಯಾ, ಎಸ್.ನಮೀತಾ, ಕೆ.ಎಂ.ಕುಮಾರ್, ರಕ್ಷಿತ್‌ದಾಸ್, ರಾಮಲಿಂಗಯ್ಯ, ಪ್ರೇಮಕುಮಾರ್, ಮಂಜು ಇದ್ದರು. 
ಮಂಡ್ಯ

ಉತ್ತಮ ಜೀವನ ಪದ್ಧತಿಯಿಂದ ಮಧುಮೇಹ ತಡೆ

ಮದ್ದೂರು: ಪ್ರಸ್ತುತ ಒತ್ತಡದ ಜೀವನದಲ್ಲಿ ಮಧುಮೇಹಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಸರಳ ಕ್ರಮಗಳ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಪಾರಂಪರಿಕ ವೈದ್ಯ ಮಂಜುನಾಥ್ ತಿಳಿಸಿದರು.
ನಗರದಲ್ಲಿ ಎನ್2ಎನ್ ಎಡಿಡಿಎಸ್ ಫೌಂಡೇಷನ್ ವತಿಯಿಂದ ಶನಿವಾರ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತಮ ಜೀವನ ಪದ್ಧತಿ ಅಳವಡಿಸಿಕೊಂಡರೆ ಮಧುಮೇಹ ಬಾರದಂತೆ ನೋಡಿಕೊಳ್ಳಬಹುದು ಎಂದರು.
ಸಕ್ಕರೆಕಾಯಿಲೆಮುಕ್ತ ಸಮಾಜದ ಕಡೆಗೆ ನಮ್ಮ ನಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಎನ್2ಎನ್ ಎಡಿಡಿಎಸ್ ಫೌಂಡೇಷನ್ ಆರಂಭಗೊಂಡಿದ್ದು, ದೇಶಾದ್ಯಂತ ಆರೋಗ್ಯ ಉಚಿತ ತಪಾಸಣಾ ಶಿಬಿರಗಳು, ಔಷಧ ವಿತರಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಜತೆಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಪಾರಂಪರಿಕ ಚಿಕಿತ್ಸೆಯನ್ನು ಪ್ರಕೃತಿದತ್ತವಾಗಿ ಸಿಗುವ ಗಿಡಮೂಲಿಕೆಗಳಿಂದ ತಯಾರಿಸಿದ ಆಯುರ್ವೇದಿಕ್ ಔಷಧಗಳನ್ನು ರೋಗಿಗಳಿಗೆ ನೀಡುವುದರಿಂದ ರೋಗಗಳು ಸಂಪೂರ್ಣವಾಗಿ ಗುಣಮುಖವಾಗುತ್ತದೆ. ಜತೆಗೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಈ ನಿಟ್ಟಿನಲ್ಲಿ ಎನ್2ಎನ್ ಎಡಿಡಿಎಸ್ ಫೌಂಡೇಷನ್ ನಿರಂತರವಾಗಿ ಜನರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾರಂಪರಿಕ ವೈದ್ಯರಾದ ದಳವೈಕೋಡಿಹಳ್ಳಿ ಬೆಟ್ಟಯ್ಯ, ಮಂಡ್ಯ ಭೈರವ, ನಿರ್ದೇಶಕರಾದ ಕೆ.ಆರ್.ರಮ್ಯಾ, ಎಸ್.ನಮೀತಾ, ಕೆ.ಎಂ.ಕುಮಾರ್, ರಕ್ಷಿತ್‌ದಾಸ್, ರಾಮಲಿಂಗಯ್ಯ, ಪ್ರೇಮಕುಮಾರ್, ಮಂಜು, ಪ್ರದೀಪ್, ಚಂದನ್ ಸೇರಿದಂತೆ ಇತರರು ಇದ್ದರು.