ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ರೈತ ಸಂಘಟನೆ ಆಯೋಜಿಸಿದ ಕಾರ್ಯಕ್ರಮದ ವೇಳೆ ಹುತಾತ್ಮರಾದ ರೈತ ನಾಯಕರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಶಂಕರೇಗೌಡ, ಮಲ್ಲಯ್ಯ, ರಾಜುಗೌಡ, ಜಿ.ಎ.ಶಂಕರ್, ಲಿಂಗಪ್ಪಾಜಿ ಇದ್ದರು. 
ಮಂಡ್ಯ

ಮುಂದಿನ ಪೀಳಿಗೆಗೆ ಹಿರಿಯರ ತ್ಯಾಗ ಪರಿಚಯಿಸಿ

ಮದ್ದೂರುರಾಜ್ಯಾದ್ಯಂತ ಸಂಘಟನೆಯನ್ನು ಬಲಿಷ್ಠಗೊಳಿಸಿ ಹಿರಿಯರ ತ್ಯಾಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಂತಹ ಕೆಲಸವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡುವ ಪಣ ತೊಡಬೇಕೆಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ತಾಲೂಕಿನ ಗೆಜ್ಜಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಶನಿವಾರ ರೈತ ಸಂಘಟನೆ ಆಯೋಜಿಸಿದ್ದ ಅಗಲಿದ ರೈತ ನಾಯಕರಾದ ಎಚ್.ಎಸ್ ರುದ್ರಪ್ಪ, ಎನ್.ಡಿ ಸುಂದರೇಶ್, ಎಂ.ಡಿ ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ, ವಿ.ಅಶೋಕ್, ನರಸರಾಜು,  ಸಾದೊಳಲು ಪುಟ್ಟಸ್ವಾಮಿ ಹಾಗೂ ಗೆಜ್ಜಲಗೆರೆಯಲ್ಲಿ ನಡೆದ ಗೋಲಿಬಾರ್ ನಲ್ಲಿ ಮಡಿದ ವಳಗೆರಹಳ್ಳಿ ನಾಥೇಗೌಡ ಮತ್ತು ಗೆಜ್ಜಲಗೆರೆ ಸಿದ್ದಪ್ಪ ಮತ್ತು ಸಾಲುಮರದ ತಿಮ್ಮಕ್ಕ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರೈತ ಸಂಘಟನೆ ಹಲವಾರು ಹೋರಾಟ ಮತ್ತು ಚಳವಳಿಗಳನ್ನು ಕೈಗೊಂಡು ಶಕ್ತಿ ತುಂಬಿರುವ ಉದಾಹರಣೆಗಳು ಸಾಕಷ್ಟು ಇದ್ದು, ಯುವ ಪೀಳಿಗೆ ಚಳವಳಿಯ ನೇತೃತ್ವ ವಹಿಸಿ ಮತ್ತಷ್ಟು ಬಲಿಷ್ಠಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಸಂಘಟನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಚಳವಳಿಗಳು ಮತ್ತು ಹೋರಾಟಗಳು ಗಟ್ಟಿಯಾಗಿ ನಿಲ್ಲಲು ಯುವ ಸಮೂಹ ಚಳವಳಿಯ ಮುಂಚೂಣಿಯ ಸ್ಥಾನವನ್ನು ಹೊರುವ ಮೂಲಕ ರೈತ ಹೋರಾಟಗಳನ್ನು ದಾಖಲು ಮಾಡಬೇಕೆಂದು ಹೇಳಿದರು.
ಆಧುನಿಕ ಕೃಷಿ ಬೇಸಾಯ ಮತ್ತು ಯಂತ್ರಗಳ ಬಳಕೆಯಿಂದಾಗಿ ವ್ಯವಸಾಯ ಸಾಕಷ್ಟು ದುಬಾರಿಯಾಗಲು ಕಾರಣವಾಗಿದ್ದು, ಜತೆಗೆ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಕೃಷಿ ಸಂಸ್ಕೃತಿಯ ಮೂಲ ಬೇರಾಗಿದ್ದು, ರೈತ ಹೋರಾಟದ ಇತಿಹಾಸ ಅರಿತು ಪ್ರತಿಯೊಬ್ಬರು ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿ ರೈತರ ಹತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಬೀದಿಗಿಳಿದು ಹೋರಾಟ ಮಾಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದರು.
ರಾಜ್ಯದಲ್ಲೇ ಗೆಜ್ಜಲಗೆರೆ ಗ್ರಾಮವು ರೈತ ಚಳವಳಿಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು ಅಂದಿನ ಸರ್ಕಾರಗಳು ಗೆಜ್ಜಲಗೆರೆ ರೈತ ನಾಯಕರ ಹೋರಾಟಕ್ಕೆ ಬೆಚ್ಚಿ ಬಿದ್ದ ಉದಾಹರಣೆಗಳು ಸಾಕಷ್ಟಿದ್ದು, ಇತ್ತೀಚಿನ ದಿನಗಳಲ್ಲಿ ರೈತ ಹೋರಾಟಗಳು ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಚಾರವೆಂದರು.
ರೈತ ಹುತಾತ್ಮರಾದ ಸ್ಥಳದಲ್ಲಿ ಸಂಘಟನೆಯ ರೈತ ನಾಯಕರ ಗ್ಯಾಲರಿ, ಗ್ರಂಥಾಲಯ, ಈ ಭಾಗದ ಕಾರ್ಯ ಚಟುವಟಿಕೆ ತರಬೇತಿ ಮತ್ತು ಮತ್ತಿತರ ಸೌಲಭ್ಯವನ್ನು ಕಲ್ಪಿಸಲು ಸಂಘಟನೆ ಮುಂದಾಗಬೇಕೆಂದು ಹೇಳಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಕೇವಲ ಬಂಡವಾಳ ಶಾಹಿಗಳ ಪರ ನಿಲ್ಲುವ ಮೂಲಕ ರೈತರನ್ನು ನಿರಂತರವಾಗಿ ವಂಚನೆ ಮಾಡುತ್ತಿದ್ದು ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವೆಂದರು.
ಕಾರ್ಯಕ್ರಮಕ್ಕೂ ಮೊದಲು ರೈತ ಹುತಾತ್ಮರಾದ ಸಿದ್ದಪ್ಪ ಹಾಗೂ ನಾಥೇಗೌಡರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರಲ್ಲದೆ, ಅಗಲಿದ ರೈತ ನಾಯಕರುಗಳಿಗೆ ಮತ್ತು ಸಾಲುಮರದ ತಿಮ್ಮಕ್ಕ ಅವರಿಗೆ ನೆರೆದಿದ್ದ ಗಣ್ಯರು ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.
 ರೈತ ಮುಖಂಡರಾದ ಬೋರಾಪುರ ಶಂಕರೇಗೌಡ, ಮಲ್ಲಯ್ಯ, ರಾಜುಗೌಡ, ಗೋವಿಂದು, ಕೆಂಪೂಗೌಡ, ತಿಮ್ಮೇಗೌಡ, ಮಹಾದೇವ, ಜಯರಾಮ, ನಾಗರಾಜು, ಲತಾಶಂಕರ್, ಮಮತಾ, ರತ್ನಮ್ಮ, ಉಮೇಶ್, ಲಿಂಗಪ್ಪಾಜಿ, ಶಂಕರ್ ದೇವರಾಜು, ರವಿಕುಮಾರ್ ಹಾಜರಿದ್ದರು.