ಮದ್ದೂರಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ.ಎಂ.ಉದಯ ಮಾತನಾಡಿದರು. ಕೋಕಿಲಾ ಅರುಣ್, ಪ್ರೊ.ಬಿ.ಕೃಷ್ಣ, ಕದಲೂರು ರಾಮಕೃಷ್ಣ, ಬಸವರಾಜು, ರಾಜೀವ್, ಕೌಡ್ಲೆ ಚನ್ನಪ್ಪ ಸೇರಿದಂತೆ ಇತರರು ಇದ್ದರು. 
ಮಂಡ್ಯ

ಮದ್ದೂರು ಪೇಟೆಬೀದಿ ವಿಸ್ತರಣಾ ಕಾಮಗಾರಿ ಶೀಘ್ರ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಉದಯ
  • ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಭೆ
ಮದ್ದೂರು: ನಗರದ ಹಳೇ ಎಂ.ಸಿ.ರಸ್ತೆ (ಪೇಟೆಬೀದಿ) ವಿಸ್ತರಣಾ ಕಾಮಗಾರಿ ಶೀಘ್ರ ಆರಂಭವಾಗಲಿದ್ದು, ಇದರೊಟ್ಟಿಗೆ ಐದು ದಾರ್ಶನಿಕರ ಪುತ್ಥಳಿ ಪ್ರತಿಷ್ಠಾಪನೆ ಕಾರ್ಯಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ ಮನವಿ ಮಾಡಿದರು.
ನಗರದ ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮತ್ತು ಹಳೇ ಎಂ.ಸಿ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯ ವೃತ್ತದಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ಪ್ರತಿಮೆ ಸ್ಥಾಪನೆ ಮಾಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಕೊಲ್ಲಿ ವೃತ್ತ, ಕೊಪ್ಪ ವೃತ್ತ, ಹಳೇ ವಿಜಯ ಬ್ಯಾಂಕ್ ವೃತ್ತ ಮತ್ತು ಕೆ.ಗುರುಶಾಂತಪ್ಪ ಸ್ಮಾರಕ ಸರ್ಕಾರಿ ಆಸ್ಪತ್ರೆ ಒಳ ಆವರಣದಲ್ಲಿ ವಿವಿಧ ಗಣ್ಯರು, ದಾರ್ಶನಿಕರ ಪ್ರತಿಮೆ ಅನಾವರಣಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಸ್ಥಾಪನೆಯಾಗುವ ಪ್ರತಿಮೆಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ಸ್ಥಳೀಯ ನಗರಸಭೆ ಆಡಳಿತದೊಟ್ಟಿಗೆ ಸಾರ್ವಜನಿಕರು ಕೈಜೋಡಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ವೇಳೆ ಹಾಜರಿದ್ದ ವಿವಿಧ ಒಕ್ಕಲಿಗ ಸಂಘಟನೆಗಳ ಪದಾಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುಖಂಡರು ಸಲಹೆ ನೀಡಿದರು. ನಗರಸಭೆ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಪ್ರೊ.ಬಿ.ಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಬಸವರಾಜು, ಮಾಜಿ ಸದಸ್ಯ ಅಣ್ಣೂರು ರಾಜೀವ್, ಹಿರಿಯ ಸಹಕಾರಿ ಕೌಡ್ಲೆ ಚನ್ನಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ, ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ದೇಶಹಳ್ಳಿ.ಆರ್.ಮೋಹನ್‌ಕುಮಾರ್, ಎಂ.ಡಿ.ಮಹಾಲಿಂಗಯ್ಯ, ಶಿವಲಿಂಗೇಗೌಡ, ಪಿ.ಶಿವಪ್ಪ ಇತರರು ಇದ್ದರು.