ವಿಶ್ವ ರೈತ ದಿನಾಚರಣೆ ಅಂಗವಾಗಿ ಮಂಗಳವಾರ ನಗರದ ಮಳವಳ್ಳಿ ರಸ್ತೆಯಲ್ಲಿರುವ ವಿಶ್ವ ರೈತನಾಯಕ ಪ್ರೊ.ನಂಜುಂಡಸ್ವಾಮಿ ಅವರ ಪುತ್ಥಳಿಗೆ ಪುಷ್ಪಾರ್ಚನೆ
ಮದ್ದೂರು: ದುಡಿಮೆಯೇ ದೇವರೆಂದು ನಂಬಿ ಹಗಲಿರುಳು ಭೂಮಿ ತಾಯಿಯ ಸೇವೆ ಸಲ್ಲಿಸಿ ಇಡಿ ಜಗತ್ತಿಗೆ ಅನ್ನ ನೀಡುವ ಕಾಯಕ ಯೋಗಿಯ ಬದುಕು ಸದಾ ಹಸನಾಗುವಂತೆ ಮಾಡಲು ಆಳುವ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಒತ್ತಾಯಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ವಿಶ್ವ ರೈತ ದಿನಾಚರಣೆ ಅಂಗವಾಗಿ ಮಂಗಳವಾರ ನಗರದ ಮಳವಳ್ಳಿ ರಸ್ತೆಯಲ್ಲಿರುವ ವಿಶ್ವ ರೈತನಾಯಕ ಪ್ರೊ.ನಂಜುಂಡಸ್ವಾಮಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಭಾರತದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ. ರೈತರಿಗಾಗಿ ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದ ಕೀರ್ತಿ ಚರಣ್ ಸಿಂಗ್ ಅವರಿಗೆ ಸಲ್ಲುತ್ತದೆ ಎಂದರು.
ದೇಶದ ಬೆನ್ನೆಲುಬು, ಅನ್ನ ನೀಡುವ ಅನ್ನದಾತರು ಪ್ರಕೃತಿಗೆ ಅವಲಂಬಿತರಾಗಿ ಎಲ್ಲ ಸಂಕಷ್ಟಗಳನ್ನು ಎದುರಿಸಿ ಬೆಳೆ ಬೆಳೆದು ಹಸಿವನ್ನು ನೀಗಿಸುವ ಶ್ರಮಿಕ ಜೀವಿ ರೈತ. ನಮ್ಮ ದೇಶದ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವವಾಗಿದೆ ಎಂದರು.
ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರಯೋಜನ ರೈತರಿಗೆ ತಲುಪಬೇಕು. ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸಿಗುವಂತಾಗಬೇಕು, ರೈತರ ಬದುಕು ಸುಧಾರಿಸಿದರೆ ಮಾತ್ರ ನಮ್ಮ ದೇಶ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರ್ಕಾರಗಳು ಕೃಷಿಯನ್ನು ಬೆಂಬಲಿಸಬೇಕು. ಕೃಷಿಗೆ ಮಾನ್ಯತೆ ಕೊಡಬೇಕು ಎಂದರು.
ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಉದ್ಘೋಷಗಳೊಂದಿಗೆ ಯೋಧ ಮತ್ತು ರೈತರಿಗೆ ಗೌರವ ಸೂಚಿಸಿದರು. ಇಡೀ ಜಗತ್ತಿನ ಶಕ್ತಿ ಅಡಗಿರುವುದು ರೈತನ ತೋಳ್ಬಲದಲ್ಲಿ ಮಾತ್ರ ಜಗತ್ತಿನ ಹಸಿವನ್ನು ನೀಗಿಸುವ ಶಕ್ತಿ ಇರುವುದು ಎಂದು ರಾಷ್ಟ್ರಕವಿ ಕುವೆಂಪು ಅವರ ನುಡಿಮುತ್ತುಗಳು ಅಮೃತವಾಣಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.