ಶ್ರೀರೇಣುಕಾ ಎಲ್ಲಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಿರುವುದು.
ಮದ್ದೂರು: ಪಟ್ಟಣದ ಹೊಳೆ ಬೀದಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮದೇವಿ 54ನೇ ವರ್ಷದ ಜಾತ್ರಾ ಮಹೋತ್ಸವ ಜ.31ರಿಂದ ವಿಜೃಂಭಣೆಯಿಂದ ನಡೆಯಲಿದೆ.
ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ 6.30ಕ್ಕೆ ಮೂಲ ದೇವರಿಗೆ ಅನುಜ್ಞೆ ಹಾಗೂ ಗಣಪತಿ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗಲಿದ್ದು, ಕಳಸ ಪ್ರತಿಷ್ಠಾಪನೆ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಫೆ.1ರ ಭರತ ಹುಣ್ಣಿಮೆಯಂದು ಬೆಳಗ್ಗೆ 8.30ಕ್ಕೆ ಮಹಾ ಚಂಡಿಕಾಯಾಗ ನಡೆಯಲಿದ್ದು, ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಮಧ್ಯಾಹ್ನ 12.30ಕ್ಕೆ ಮುತದತ್ತೈದೆಯರಿಂದ ತಂಬಿಟ್ಟಿನ ಆರತಿ ಏರ್ಪಡಿಸಲಾಗಿದ್ದು, ಮಧ್ಯಾಹ್ನ 1ರಿಂದ ಸಂಜೆ 4 ರವರೆಗೆ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 4.15ರಿಂದ ಸಂಜೆ 5.30ರ ವರೆಗೆ ನಿಂಬೆಹಣ್ಣಿನ ದೀಪದ ಆರತಿ ಮತ್ತು ಉಯ್ಯಲೋತ್ಸವವನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದೆ.
ರಾತ್ರಿ 7 ಕ್ಕೆ ನಗರದ ಪ್ರಸಿದ್ಧ ಶ್ರೀಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಿಸಿ ದೇವಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.
ತಿರುಪತಿ ತಿರುಮಲ ದೇವಸ್ಥಾನದ ಮಂಜು ಬಾಲಾಜಿ ಅವರ ವಾದ್ಯಗೋಷ್ಠಿ, ಮಂಗಳೂರಿನ ಯಕ್ಷಗಾನ, ಕೇರಳದ ಚಂಡೆ ಮೇಳ, ತಮಿಳುನಾಡಿನ ಬ್ಯಾಂಡ್‌ಸೆಟ್ ಸೇರಿದಂತೆ ಮದ್ದೂರಮ್ಮ ನವರ ಪೂಜಾ ಕುಣಿತ, ದಂಡಿನಮಾರಮ್ಮನವರ ಪೂಜಾ ಕುಣಿತ, ಕಲಾವಿದರಿಂದ ತಮಟೆ, ನಗಾರಿ, ಜಾನಪದ ಮೇಳ ಸೇರಿದಂತೆ ಹಲವು ಪ್ರಾಕಾರಗಳು ಮೆರವಣಿಗೆಯಲ್ಲಿ ಸಾಗಲಿವೆ.
ರಾತ್ರಿ ಇಡೀ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸಾಗಿ ಸೋಮವಾರ ಬೆಳಗ್ಗೆ 6ಕ್ಕೆ ದೇವಸ್ಥಾನದ ಮೂಲಸ್ಥಾನ ತಲುಪಲಿದೆ ಎಂದು ದೇವಸ್ಥಾನದ ಧರ್ಮದರ್ಶಿ, ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದ್ದಾರೆ.