ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಶಾಸಕ ಕೆ.ಎಂ.ಉದಯ್ ಮಾತನಾಡಿದರು. ಕೋಕಿಲಾ, ಎಂ.ಬಿ.ಸಚಿನ್, ಸರ್ವಮಂಗಳ, ಸಿದ್ದರಾಜು, ಮಮತಾಶಂಕರೇಗೌಡ, ಸಂತೋಷ್ ಇದ್ದರು.
- ದನಗಳ ಜಾತ್ರೆ, ಕ್ರಿಕೆಟ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು
ಮದ್ದೂರು: ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಆಯೋಜಿಸಲಾಗುತ್ತಿರುವ ಮದ್ದೂರು ಉತ್ಸವ ಏ.25ರಿಂದ ಮೇ 6ವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಏ.25ಕ್ಕೆ ನಗರದ ಪ್ರವಾಸಿ ಮಂದಿರ ಆವರಣದಿಂದ ಶ್ರೀ ಉಗ್ರನರಸಿಂಹಸ್ವಾಮಿ ದೇವಾಲಯದವರೆಗೆ ಮ್ಯಾರಥಾನ್ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಸುಗಳ ಜಾತ್ರೆ: ಏ.25ರಿಂದ ಏ.30 ರವರೆಗೆ ರಾಸುಗಳ ಜಾತ್ರೆ ನಡೆಯಲಿದೆ. ಉತ್ತಮ ರಾಸುಗಳನ್ನು ಚಾಂಪಿಯನ್ ಎಂದು ಘೋಷಿಸಿ, ಕ್ರಮವಾಗಿ ಮೊದಲ ಚಾಂಪಿಯನ್‌ಗೆ 2 ಲಕ್ಷ ರೂ. ಎರಡನೇ ಚಾಂಪಿಯನ್‌ಗೆ 1 ಲಕ್ಷ ರೂ. ಮೂರನೇ ಚಾಂಪಿಯನ್‌ಗೆ 50 ಸಾವಿರ ರೂ. ನಗದು ಬಹುಮಾನ ಕೊಡಲಾಗುವುದು. ಅಲ್ಲದೆ 10 ರಾಸುಗಳಿಗೆ 10 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ಇದೇ ಮೊದಲ ಬಾರಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳುವ ಟಗರುಗಳಿಗೂ ಕೂಡ ಕ್ರಮವಾಗಿ 10 ಸಾವಿರ ರೂ. ಹಾಗೂ 5 ಸಾವಿರ ರೂ.ನಗದು ಬಹುಮಾನ ನೀಡಲಾಗುವುದು. ಬಹುಮಾನ ವಿಜೇತ ರಾಸುಗಳನ್ನು ಏ.30 ರಂದು ಮದ್ದೂರು ಪ್ರವಾಸಿ ಮಂದಿರ ಆವರಣದಿಂದ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯದ ಆವರಣದವರೆಗೆ ಮೆರವಣಿಗೆ ಮೂಲಕ ಕರೆತಂದು ಬಹುಮಾನ ನೀಡಿ ಗೌರವಿಸಲಾಗುವುದು. ಶಿವಪುರದಲ್ಲಿರುವ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ರೈತರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.
ಕಬಡ್ಡಿ, ವಾಲಿಬಾಲ್ ಪಂದ್ಯಾವಳಿ: ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 18 ವರ್ಷ ಮೇಲ್ಪಟ್ಟ ಯುವಕ, ಯುವತಿಯರಿಗೆ ಏ.28, 29ರಂದು ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಆಸಕ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ವಿಜೇತ ತಂಡಗಳಿಗೆ ಕ್ರಮವಾಗಿ 50 ಸಾವಿರ ರೂ., 25 ಸಾವಿರ ರೂ., 10 ಸಾವಿರ ರೂ. ನಗದು ಬಹುಮಾನ ನೀಡುವುದರ ಜತೆಗೆ 10 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ರಂಗೋಲಿ ಸ್ಪರ್ಧೆ: ಮೇ 1ರಿಂದ 4 ರವರೆಗೆ ಮದ್ದೂರು ಪಟ್ಟಣದ ನಿವಾಸಿಗಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯು ಪ್ರತಿ ವಾರ್ಡ್ ಮಟ್ಟದಲ್ಲಿ ನಡೆಯಲಿದೆ. ಪ್ರತಿ ವಾರ್ಡ್‌ನಲ್ಲಿ ವಿಜೇತರಾದ ಮಹಿಳೆಯರಿಗೆ ಮಿಕ್ಸಿ, ಕುಕ್ಕರ್, ಬಿಸಿ ನೀರು ಜಗ್ಗು ಬಹುಮಾನವಾಗಿ ನೀಡಲಾಗುವುದು. ಅಲ್ಲದೆ ವಾರ್ಡ್ ಮಟ್ಟದಲ್ಲಿ ವಿಜೇತರಾದ ಮಹಿಳೆಯರಿಗೆ ಮತ್ತೊಮ್ಮೆ ಸ್ಪರ್ಧೆ ಆಯೋಜಿಸಿ ವಾಷಿಂಗ್ ಮಷಿನ್, ರೆಪ್ರಿಜರೇಟರ್, ಗ್ರೈಂಡರ್ ಹಾಗೂ 10 ಸಮಾಧಾನಕರ ಬಹುಮಾನ ನೀಡಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿ ಸ್ಪರ್ಧೆಯ ಉಸ್ತುವಾರಿ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಗೀತ ಸಂಜೆ: ಮೇ 6ರಂದು ಮದ್ದೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಸಂಗೀತ ಸಂಜೆ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಖ್ಯಾತ ಚಲನಚಿತ್ರ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ. ಖ್ಯಾತ ರ‌್ಯಾಪರ್ ಚಂದನ್ ಶೆಟ್ಟಿ, ನವೀನ್ ಸಜ್ಜು ತಂಡದವರಿಂದ ರಸ ಮಂಜರಿ ನಡೆಯಲಿದೆ.
ಖ್ಯಾತ ಚಿತ್ರನಟರಾದ ವಿ.ರವಿಚಂದ್ರನ್, ಸಾಧುಕೋಕಿಲ, ಗಣೇಶ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು. ಜತೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮಾಜಿ ಸದಸ್ಯರಾದ ಎಂ.ಬಿ.ಸಚಿನ್, ಸರ್ವಮಂಗಳಾ, ಸಿದ್ದರಾಜು, ಬಸವರಾಜು, ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಮಮತಾ ಶಂಕರೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಮುಖಂಡರಾದ ಎಂ.ಡಿ.ಮಹಾಲಿಂಗಯ್ಯ, ಸಿದ್ದರಾಮಣ್ಣ, ಚನ್ನೇಗೌಡನದೊಡ್ಡಿ ಹೊಂಬಯ್ಯ, ಮರಿದೇವರು, ಎಂ.ಸಿ.ಲಿಂಗರಾಜು, ಇಮ್ತಿಯಾಜ್ ಉಲ್ಲಾ ಖಾನ್, ಎಂ.ಎಲ್.ಸಂತೋಷ್, ಡಿ.ಸಿ.ರಾಜು, ರವಿ, ಅರುಣ್‌ಕುಮಾರ್, ವೆಂಕಟೇಶ್, ಇದ್ದರು.