ಮದ್ದೂರು ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿರುವುದು. 
ಮಂಡ್ಯ

ಮದ್ದೂರು ಬಂದ್ ಶಾಂತಿಯುತ

ಮದ್ದೂರು:

ತಮಿಳುನಾಡಿಗೆ 15 ದಿನಗಳವರೆಗೆ 12 ಟಿಎಂಸಿ ನೀರು ಹರಿಸುವಂತೆ ಆದೇಶ ಮಾಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಆದೇಶ ಖಂಡಿಸಿ ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಗುರುವಾರ ಕರೆದಿದ್ದ ಮದ್ದೂರು ಬಂದ್ ಶಾಂತಿಯುತವಾಗಿ ಸಂಪೂರ್ಣ ಯಶಸ್ವಿಯಾಯಿತು.

ಬಂದ್ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿದ್ದರು. ಚಿತ್ರಮಂದಿರಗಳು, ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು, ಎಲ್‌ಐಸಿ ಕಚೇರಿ ಸೇರಿದಂತೆ ಬಹುತೇಕ ಕಚೇರಿಗಳು ಬಂದ್‌ಗೆ ಸಹಕಾರ ನೀಡಿದ್ದವು. ಔಷಧ, ಹಾಲು, ಆಸ್ಪತ್ರೆ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳು ಎಂದಿನಂತೆ ತೆರೆದಿದ್ದವು.
ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಗರದ ಪ್ರವಾಸಿ ಮಂದಿರದಿಂದ ಬೈಕ್ ಜಾಥಾ ಹೊರಟು ನಗರದ ಪ್ರಮುಖ ಸಂಚಾರ ಮಾಡಿ, ನಂತರ ಶಿವಪುರಕ್ಕೆ ತೆರಳಿ ಅಲ್ಲಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮುಖಾಂತರ ಪ್ರವಾಸಿ ಮಂದಿರ ಬಳಿ ಆಗಮಿಸಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ವಾಸ್ತವ ಸ್ಥಿತಿ ಅರಿಯದೆ ಅವೈಜ್ಞಾನಿಕ ಆದೇಶ ನೀಡಿರುವುದನ್ನು ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ (ಕಕಜವೇ) ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ಸಿಡಬ್ಲ್ಯುಆರ್‌ಸಿ 15 ದಿನಗಳವರೆಗೆ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸು ಮಾಡಿರುವುದು ಅವೈಜ್ಞಾನಿಕವಾಗಿದ್ದು, ಕಾವೇರಿ ಕೊಳದದಲ್ಲಿ ಸಮರ್ಪಕವಾಗಿ ಮಳೆಯಾಗದ ಪರಿಣಾಮ ನಾವೇ ನೀರಿಗಾಗಿ ಪರಿತಪ್ಪಿಸುವ ಸ್ಥಿತಿಯಿರುವಾಗ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ. ಸರ್ಕಾರ ಯಾವುದೇ ಕಾರಣಕ್ಕೂ ಯಾವುದೇ ಒತ್ತಡಕ್ಕೆ ಮಣಿಯದೆ ನೀರು ಹರಿಸಬಾರದು ಎಂದು ಆಗ್ರಹಿಸಿದರು.
ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ರೈತ ಸಂಘದ ತಾಲೂಕು ಅಧ್ಯಕ್ಷ ಎ.ಚ್.ಜಿ.ಪ್ರಭುಲಿಂಗು, ರೈತ ಮುಖಂಡರಾದ ಸೊ.ಶಿ.ಪ್ರಕಾಶ್, ಗುಡಿದೊಡ್ಡಿ ಶಿವಲಿಂಗಯ್ಯ, ಜಗದೀಶ್, ವೆಂಕಟೇಶ್, ಉಮೇಶ್, ಕೆ.ಜಿ.ಉಮೇಶ್, ರಾಮಣ್ಣ, ಶಿವರಾಮಣ್ಣ, ರಾಮಲಿಂಗಯ್ಯ, ಪುಟ್ಟಸ್ವಾಮಿ, ಕಕಜವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಪದಾಧಿಕಾರಿಗಳಾದ ಆಲೂರು ಚೆನ್ನಪ್ಪ, ವಿಶ್ವಾಸ್, ಎಚ್.ಶಿವಲಿಂಗಯ್ಯ, ವಿ.ಪಿ.ವರದರಾಜು, ಉಮೇಶ್ ಸೇರಿದಂತೆ ಇತರರು ಇದ್ದರು.