ಜಮೀನಿಗೆ ತೆರಳಲು ಸ್ಥಳೀಯರು ವಿರೋಧ ಮಾಡುತ್ತಿದ್ದಾರೆಂದು ಆರೋಪಿಸಿ ತಾಯಿ ಮರಿಯಮ್ಮ, ಪುತ್ರ ನಾಗರಾಜು ಮದ್ದೂರು ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. 
ಮಂಡ್ಯ

ತಾಲೂಕು ಕಚೇರಿ ಮುಂದೆ ತಾಯಿ-ಮಗ ಪ್ರತಿಭಟನೆ

ಮದ್ದೂರು: ತಮಗೆ ಮಂಜೂರಾಗಿರುವ ಜಮೀನಿಗೆ ತೆರಳಲು ಹಾಗೂ ವ್ಯವಸಾಯ ಮಾಡಲು ಕೆಲ ಸ್ಥಳೀಯರು ವಿರೋಧ ಮಾಡುತ್ತಿದ್ದಾರೆಂದು ಆರೋಪಿಸಿ ತಾಯಿ ಹಾಗೂ ಪುತ್ರ ನಗರದ ತಾಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ನಾಗರಾಜು ಮಾತನಾಡಿ, ತಾಲೂಕಿನ ದುಂಡನಹಳ್ಳಿ ಗ್ರಾಮದಲ್ಲಿ ನಮ್ಮ ತಾತ ಕುಳ್ಳಲಿಂಗೇಗೌಡರ ಮಗ ಕೆಂಪೇಗೌಡ ಅವರಿಗೆ 1980 ಬಗರ್ ಹುಕುಂನಲ್ಲಿ ಜಮೀನು ಮಂಜೂರಾಗಿತ್ತು. ಈಗಲೂ 4.35 ಎಕರೆ ಜಮೀನು ನಮಗೆ ಸೇರಿದ್ದರೂ ಜಮೀನಿನ ಅಕ್ಕಪಕ್ಕದಲ್ಲಿರುವ ಕೆಲವರು ನಮ್ಮ ಜಮೀನಿಗೆ ತೆರಳಲು ಹಾಗೂ ಅಲ್ಲಿ ಬೇಸಾಯ ಮಾಡಲು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಎಷ್ಟೋ ಬಾರಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೆ ತಹಸೀಲ್ದಾರ್ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ಆದೇಶ ಬಂದಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಜಮೀನಿಗೆ ಹದ್ದುಬಸ್ತು ಮಾಡಿಸಿಕೊಟ್ಟು, ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಒಂದು ವಾರದೊಳಗೆ ನಿಮ್ಮ ಜಮೀನಿನ ಬಂದು ಅಳತೆ ಮಾಡಿಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ನಾಗರಾಜು ಅವರ ತಾಯಿ ಮರಿಯಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.