ಮಂಡ್ಯ ನಗರದ ಮಹಾವೀರ ಭವನದಲ್ಲಿ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತ್ಯುತ್ಸವದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಅವರನ್ನು ಅಭಿನಂದಿಸಲಾಯಿತು. 
ಮಂಡ್ಯ

ಮಹಾವೀರರ ಸಿದ್ಧಾಂತವನ್ನು ಜೀವನದಲ್ಲಿ ರೂಢಿಸಿಕೊಳ್ಳಲಿ: ಶಾಸಕ ಪಿ.ರವಿಕುಮಾರ್ ಗಣಿಗ ಕರೆ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಜಯಂತ್ಯುತ್ಸವ ಆಚರಣೆ
  • ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜನೆ
ಮಂಡ್ಯ: ವರ್ಧಮಾನ ಮಹಾವೀರ ಅವರು ತ್ಯಾಗ ಮತ್ತು ಅಹಿಂಸೆಯ ಪ್ರತಿಪಾದಕರು. ಅಂತೆಯೇ ಯುವ ಪೀಳಿಗೆಯೂ ಮಹಾವೀರರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ ಮಹಾವೀರ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರ ವರ್ಧಮಾನ ಮಹಾವೀರ ಅವರು ಕ್ರಿ.ಪೂ 6ನೇ ಶತಮಾನದಲ್ಲಿ ಬಿಹಾರದ ಕುಂದಗ್ರಾಮದಲ್ಲಿ ಜನಿಸಿದವರು. ಸಿದ್ಧಾರ್ಥ ಮತ್ತು ತ್ರಿಶುಲಾ ದೇವಿಯ ಪುತ್ರ. 30ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ 12 ವರ್ಷಗಳ ತೀವ್ರ ತಪಸ್ಸಿನ ನಂತರ ಕೇವಲ ಜ್ಞಾನ (ಸರ್ವಜ್ಞತ್ವ) ಪಡೆದರು. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳನ್ನು ಬೋಧಿಸಿದರು. ಯುವ ಪೀಳಿಗೆಯವರು ಮಹಾವೀರರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಹಾದಿಯಲ್ಲಿ ನಡೆದು ಸಮಾಜದ ಶಾಂತಿಯನ್ನು ಕಾಪಾಡು ನಿಟ್ಟಿನಲ್ಲಿ ಬದುಕಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮಹಾವೀರರ ಆದರ್ಶ, ಚಿಂತನೆ, ಬೋಧನೆಗಳನ್ನು ಸಮಾಜಕ್ಕೆ ಅತ್ಯಾವಶ್ಯಕ. ಮಕ್ಕಳು ಮಹಾವೀರರ ಆದರ್ಶ, ಚಿಂತನೆ, ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೈನ ಧರ್ಮದ ಮೌಲ್ಯಗಳನ್ನು ಕವಿಗಳಾದ ಪಂಪ, ರನ್ನ, ಪೊನ್ನ ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಜೈನ ಧರ್ಮ ಶಾಂತಿ ಮತ್ತು ಅಹಿಂಸೆ ಹಾಗೂ ಭಕ್ತಿ, ಶ್ರದ್ಧೆಯಿಂದ ಜಗತ್ತನ್ನು ಗೆಲ್ಲಬಹುದು ಎಂಬ ಸಂದೇಶವನ್ನು ಸೂಚಿಸುತ್ತದೆ ಎಂದರು.
ಮಹಾವೀರರ ಆದರ್ಶಗಳು, ಚಿಂತನೆಗಳು, ಬೋಧನೆಗಳು ಶಾಶ್ವತವಾಗಿ ಜಗತ್ತಿನಲ್ಲಿ ಉಳಿದಿವೆ. ಪಾಲಕರಿಗೆ ಮಕ್ಕಳಿಗೆ ಅವರ ಆದರ್ಶ ಚಿಂತನೆಗಳನ್ನು ತಿಳಿಸುವ ಜತೆಗೆ ಸಂಸ್ಕಾರವನ್ನು ಕಲಿಸಬೇಕು. ಹಾಗೂ ಸಹನೆ ಶಾಂತಿ, ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು ಎಂಬ ಆತ್ಮವಿಶ್ವಾಸವನ್ನು ಬೆಳಸಬೇಕು ಎಂದು ತಿಳಿಸಿದರು.
ನರಸಿಂಹರಾಜಪುರ ಕ್ಷೇತ್ರದ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಕಂಬದಹಳ್ಳಿ ಕ್ಷೇತ್ರದ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಆರತಿಪುರ ಕ್ಷೇತ್ರದ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಮಧುಶ್ರೀ, ನಗರಸಭೆ ಮಾಜಿ ಸದಸ್ಯ ಶ್ರೀಧರ್, ಸಮುದಾಯದ ಅಧ್ಯಕ್ಷ ಎಂ.ಬಿ.ಶ್ರೀಧರ್, ಮುಖಂಡರಾದ ಶಾಂತಿಪ್ರಸಾದ್, ವಿನಯ್‌ಕುಮಾರ್, ಮಹೇಂದ್ರಬಾಬು, ಧರಣೇಂದ್ರಯ್ಯ ಇತರರಿದ್ದರು.
ಇದೇ ವೇಳೆ ಜ್ವಾಲಾ ಮಾಲಿನಿ ಮಹಿಳಾ ಸಮಾಜದ ವತಿಯಿಂದ 2024-25ನೇ ಸಾಲಿನ 7ನೇ ತರಗತಿ, ಎಸ್‌ಎಸ್‌ಎಲ್ಸಿ, ದ್ವಿತೀಯ ಪಿಯುಸಿ ಹಾಗೂ ಅಂತಿಮ ವರ್ಷದ ಪದವಿಯಲ್ಲಿ ಶೇ.70ರಷ್ಟು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.