ಮಂಡ್ಯದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತ್ಯುತ್ಸವವನ್ನು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್ ಉದ್ಘಾಟಿಸಿದರು. 
ಮಂಡ್ಯ

ಸಮಾಜಕ್ಕೆ ಶಾಂತಿ ಸಂದೇಶ ಸಾರಿದ ಬುದ್ಧ: ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಭಗವಾನ್ ಬುದ್ಧ ಜಯಂತ್ಯುತ್ಸವ
  • ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ಭಗವಾನ್ ಬುದ್ಧ ರಾಜಮನೆತನದಲ್ಲಿ ಹುಟ್ಟಿ ವೈಭೋಗದಿಂದ ಇದ್ದವರು. ಆದರೆ ರೋಗಗ್ರಸ್ತ ಮನುಷ್ಯ, ಮುಪ್ಪು, ಸಾವು ಎಲ್ಲವನ್ನು ಕಂಡು ರಾಜ ವೈಭೋಗವನ್ನು ಬಿಟ್ಟು ಸನ್ಯಾಸಿಯಾಗಿ ಸಮಾಜಕ್ಕೆ ಶಾಂತಿ ಸಂದೇಶವನ್ನು ಸಾರಿದ ಮಹಾನ್ ಚೇತನ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ ಅವರು ಜಗತ್ತಿಗೆ ಶಾಂತಿಯನ್ನು ಸಾರಿದವರು. ಅವರ ಬೋಧನೆಗಳು ಇಂದಿಗೂ ಶಾಂತಿ, ಸಹಾನುಭೂತಿ ಮತ್ತು ಸೌಹಾರ್ದತೆಯ ಮಾರ್ಗದಲ್ಲಿ ಬದುಕಲು ಜನರಿಗೆ ಮಾರ್ಗದರ್ಶನವಾಗಿವೆ. ಲೋಕವು ದುಃಖಮಯವಾಗಿದೆ. ಆಸೆಯೇ ದುಃಖಕ್ಕೆ ಮೂಲ, ಆಸೆಯನ್ನು ಗೆದ್ದರೆ ದುಃಖ ನಿವಾರಿಸಬಹುದು, ದುಃಖ ನಿವಾರಣೆಗೆ ಮಾರ್ಗವಿದೆ ಎಂದು ತಿಳಿಸಿದರು.
ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ ಮಾತನಾಡಿ, ಬುದ್ಧನು ಬೋಧಿಸಿದ ಪಂಚಶೀಲ ತತ್ವಗಳು ಮನುಷ್ಯನ ನೈತಿಕ ಮತ್ತು ಶಾಂತಿಯುತ ಜೀವನಕ್ಕೆ ಬುನಾದಿಯಾಗಿದೆ. ಪಂಚಶೀಲ ತತ್ವಗಳು ಕೇವಲ ನಿಯಮಗಳಲ್ಲ, ಬದಲಾಗಿ ಸುಖಿ ಜೀವನಕ್ಕೆ ಅಳವಡಿಸಿಕೊಳ್ಳಬೇಕಾದ ಜೀವನಶೈಲಿ ಎಂದು ಬೋಧಿಸಿದವರು. ಬುದ್ಧರ ಭೋದನೆ ಹಾಗೂ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬುದ್ಧ ಅವರ ಪಂಚಶೀಲ ತತ್ವ ಹಾಗೂ ಅಷ್ಟ ಮಾರ್ಗವನ್ನು ಸಮಾಜದಲ್ಲಿ ಪ್ರತಿಯೊಬ್ಬರು ಅನುಸರಣೆ ಮಾಡಬೇಕು. ಎಲ್ಲರೂ ಶಾಂತಿಯಿಂದ ನಡೆಯಬೇಕು. ಬುದ್ಧರ ಆದರ್ಶವನ್ನು ಪಾಲಿಸಿದರೆ ಅಪರಾಧವೆ ಇರುವುದಿಲ್ಲ. ಹೀಗಾಗಿ ಆಸೆಯೇ ದುಃಖಕ್ಕೆ ಕಾರಣ ಎಂಬುದನ್ನು ಅರಿತು ನಡೆಯಬೇಕು. ಇದರಿಂದ ಸಮಾಜದಲ್ಲಿ ಅಪರಾಧ ಕಡಿಮೆಯಾಗಲಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಕೆ.ಮಹದೇವಯ್ಯ ಕಲ್ಲಾರೆಪುರ ಮಾತನಾಡಿ, ಬುದ್ಧ. ಧಮ್ಮ, ಸತ್ಯ ಹಾಗೂ ಶಾಂತಿಯನ್ನು ಅರಿತು ನಡೆಯಬೇಕು ಬುದ್ಧರ ವಾಸ್ತವಿಕ ಸತ್ಯವನ್ನು ತಿಳಿಯಬೇಕು ಎಂದರು.
ಜಿಲ್ಲಾ ಸತ್ಯದ ದೇವಾಲಯ ಬೌದ್ಧ ಅಭಿವೃದ್ಧಿ ಕೇಂದ್ರದ ಪೂಜ್ಯ ಭಂತೆ ಧಮ್ಮವೀರ ಅವರು ಬುದ್ಧರ ಪ್ರತಿಮೆಗೆ ಪುಷ್ಪ ನಮನದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ತಹಸೀಲ್ದಾರ್ ವಿಶ್ವನಾಥ್, ಪೌರಾಯುಕ್ತೆ ಪಂಪಶ್ರೀ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್, ನಗರಸಭೆ ಮಾಜಿ ಸದಸ್ಯ ಶ್ರೀಧರ್, ವಿವಿಧ ಸಂಘಟನೆಯ ಎಲ್. ಸಂದೇಶ್, ಅನ್ನದಾನಿ, ಎಂ.ವೆಂಕಟೇಶ್, ಶಿವರಾಜ್, ಅಮ್ಜದ್ ಪಾಷಾ, ನಾರಾಯಣಸ್ವಾಮಿ, ವೆಂಕಟಗಿರಿ, ಶಿವಪ್ರಕಾಶ್ ಇತರರಿದ್ದರು.