ಶ್ರೀರಂಗಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಶುಕ್ರವಾರ ಭೂಮಿತಾಯಿ ಹೋರಾಟ ಸಮಿತಿಯ ಕಾರ್ಯಕರ್ತರು ರೈತನಾಯಕ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ತಾಲೂಕು ಆಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣ: ತಾಲೂಕಿನ ವಿವಿಧೆಡೆ ಬೆಲೆಬಾಳುವ ಸರ್ಕಾರಿ ಭೂಮಿ ತಾಲೂಕು ಆಡಳಿತದ ನಿಯಂತ್ರಣವಿಲ್ಲದೆ ನಿರಂತರವಾಗಿ ಲೂಟಿಯಾಗುತ್ತಿದ್ದು, ಭೂ ಮಾಫಿಯಾದ ಜತೆಗೆ ಸರ್ಕಾರಿ ಅಧಿಕಾರಿಗಳೇ ಶಾಮೀಲಾಗಿರುವ ಸಂಶಯವಿದೆ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಗಂಭೀರ ಆರೋಪ ಮಾಡಿದರು.
ಪಟ್ಟಣದ ಡಿವೈಎಸ್ಪಿ ಕಚೇರಿಗೆ ಶುಕ್ರವಾರ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ಆಗಮಿಸಿದ ಅವರು ತಾಲೂಕಿನಾದ್ಯಂತ ಕಾಣೆಯಾಗಿರುವ ಸರ್ಕಾರಿ ಭೂಮಿ ಪತ್ತೆ ಮಾಡಿಕೊಡುವಂತೆ ದೂರು ನೀಡಿ ಬಳಿಕ ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ ಮಾತನಾಡಿದರು.
ಮೈಸೂರು ಮಹಾನಗರಕ್ಕೆ ಅತ್ಯಂತ ಸಮೀಪದಲ್ಲಿರುವ ಶ್ರೀರಂಗಪಟ್ಟಣ ತಾಲೂಕಿನ ವಿವಿಧ ಹೋಬಳಿಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಿಗೆ ಚಿನ್ನದಂತಹ ಬೆಲೆಯಿದ್ದು, ಎಲ್ಲೆಡೆ ಭೂ ಮಾಫಿಯಾ ವ್ಯಾಪಕವಾಗಿ ಹರಡಿಕೊಂಡಿದೆ. ಹೀಗಾಗಿ ತಾಲೂಕು ಆಡಳಿತ ಕಚೇರಿ ರಿಯಲ್ ಎಸ್ಟೇಟ್ ಕಚೇರಿಯಾಗಿ ಪರಿವರ್ತನೆಯಾಗಿದ್ದು, ಸರ್ಕಾರಿ ಅಧಿಕಾರಿಗಳೇ ದಳ್ಳಾಳಿಗಳಾಗಿ ಸರ್ಕಾರಿ ಭೂಮಿಗಳನ್ನು ಪ್ರಭಾವಿ ಉದ್ಯಮಿಗಳಿಗೆ ಅಕ್ರಮವಾಗಿ ಕಬಳಿಕೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ದೂರಿದರು.
ಕೆ.ಆರ್.ಸಾಗರ ರಸ್ತೆಯಲ್ಲಿ ವಸೂಲಿ ಮಾಡುತ್ತಿರುವ ಸೇತುವೆ ಸುಂಕ 2023ರಲ್ಲೇ ಮುಕ್ತಾಯವಾಗಿದ್ದು, ಅಕ್ರಮವಾಗಿ ವಸೂಲಿ ಮಾಡುತ್ತಿರುವ ದಂಧೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಪಾಂಡವಪುರ ಸಕ್ಕರೆ ಕಾರ್ಖಾನೆ ಮಾತ್ರ ಖಾಸಗೀಕರಣಕ್ಕೆ ಒಳಪಟ್ಟಿದ್ದು, ಆದರೆ ಈಗ ಅವರಿಂದ ಆಗುತ್ತಿರುವ ಕಬಳಿಕೆಗೆ ಕಡಿವಾಣ ಹಾಕಿ ರಕ್ಷಿಸುವ ಜತೆಗೆ ಕಾರ್ಖಾನೆಯ ಉಳಿದ ಆಸ್ತಿಗಳ ಬಗ್ಗೆ ಸರ್ಕಾರ ಶೀಘ್ರವೇ ಸಮಿತಿ ರಚಿಸಿ ಕೋಟ್ಯಂತರ ಮೌಲ್ಯದ ಆಸ್ತಿ ಉಳಿಸಲು ಗಮನಹರಿಸಬೇಕು ಎಂದು ಆಗ್ರಹಿಸಿದರು.
ಇಲ್ಲವಾದಲ್ಲಿ ಇಂತಹ ಅಕ್ರಮ ಹಾಗೂ ಅವಕಾಶ ನೀಡುತ್ತಿರುವ ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ದ ಬೃಹತ್ ಭೂಮಿ ತಾಯಿ ಹೋರಾಟ ಸಮಿತಿ ರೈತರುಗಳೊಂದಿಗೆ ಬೃಹತ್ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಬಳಿಕ ಪ್ರತಿಭಟನಾಕಾರದಿಂದ ಮನವಿ ಸ್ವೀಕರಿಸಿದ ತಹಸೀಲ್ದಾರ್ ಚೇತನಾ ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಮೇಲಧಿಕಾರಿಗಳಿಗೆ ಪತ್ರ ಬರೆದು ಕ್ರಮವಹಿಸುವ ಭರವಸೆ ನೀಡಿದರು.
ಭೂಮಿ ತಾಯಿ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಸ್.ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ ಮತ್ತು ದರ್ಶನ್, ಖಜಾಂಚಿ ಉಂಡುವಾಡಿ ಮಹದೇವು, ಉಪಾಧ್ಯಕ್ಷ ಜಯರಾಮು, ಹಿರಿಯ ಮುಖಂಡ ಹಳುವಾಡಿ ನಾಗೇಂದ್ರು, ಕಾರ್ಯಕರ್ತರಾದ ಶಿವರಾಜು, ಚಂದಗಾಲು ಶಿವಣ್ಣ, ತಿಮ್ಮೇಗೌಡ, ರವಿಲಕ್ಷ್ಮಣ, ರಾಮಕೃಷ್ಣ, ದೇವರಾಜು, ಪುರಷೋತ್ತಮ್, ದರಸಗುಪ್ಪೆ ನಾಗಣ್ಣ, ರಾಮಚಂದ್ರು, ಕೆಂಪೇಗೌಡ ಇತರರು ಹಾಜರಿದ್ದರು.