Lokayukta 
ಮಂಡ್ಯ

ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಆರೋಪಿಗಳ ಮನೆ ಸೇರಿ ಏಳು ಕಡೆ ಲೋಕಾಯುಕ್ತರ ದಾಳಿ

ನಾಗಮಂಗಲ: ಬಗರ್ ಹುಕಂ ಯೋಜನೆಯಡಿ ಭೂಮಿಗಾಗಿ ರೈತರು ಸಲ್ಲಿಸಲಾಗಿದ್ದ ಅರ್ಜಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದ ದೂರು ಮತ್ತು ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಪೊಲೀಸರ ತಂಡ ನಾಗಮಂಗಲ ತಾಲೂಕು ಕಚೇರಿ ಸೇರಿ ಆರೋಪಿಗಳ ಮನೆಗಳು ಸೇರಿದಂತೆ ಏಳು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸುವ ಮೂಲಕ ದಾಖಲಾತಿಗಳ ಪರಿಶೀಲನಾ ಕಾರ್ಯ ಮಂಗಳವಾರ ತಡರಾತ್ರಿವರೆಗೂ ನಡೆದಿದೆ.
ದರಖಾಸ್ತು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್, ಭೂ ದಾಖಲೆಗಳ ವಿಭಾಗದ ಯೋಗೇಶ್ ಹಾಗೂ ಕಾಂತಾಪುರ ವೃತ್ತದ ಗ್ರಾಮ ಸಹಾಯಕ ಯೋಗೇಶ್ ಎಂಬ ಸರ್ಕಾರಿ ನೌಕರರ ಜತೆಗೆ ನಾಗಮಂಗಲ ಪಟ್ಟಣ ವಾಸಿ ವಾಸೀಂ ಉಲ್ಲಾಖಾನ್‌ಎಂಬುವರು ಸೇರಿ ನಾಲ್ವರು ಆರೋಪಿಗಳ ಮನೆ, ತಾಲೂಕು ಕಚೇರಿಯ ದರಖಾಸ್ತು ಹಾಗೂ ರೆಕಾರ್ಡ್ ರೂಂ ಹಾಗೂ ಕಾಂತಾಪುರ ವೃತ್ತದ ಗ್ರಾಮ ಸೇವಕನಿಗೆ ಸೇರಿದ ಕಾರು ಮತ್ತು ಸ್ಟೇಷನರಿ ಸ್ಟೋರ್ ಸೇರಿದಂತೆ ವಿವಿಧ ಕಡೆ ದಾಳಿ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿದ ಮಂಡ್ಯ ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಟಾಧಿಕಾರಿ ಸುರೇಶ್‌ಬಾಬು, ತನಿಖೆ ಮಾಡಿದಷ್ಟು ಭ್ರಷ್ಟಾಚಾರದ ವ್ಯಾಪ್ತಿ ದೊಡ್ಡದಾಗುತ್ತಿದೆ. ಮಂಗಳವಾರ ತಡರಾತ್ರಿಯಾದರೂ ಮುಗಿಯುವ ಲಕ್ಷಣ ಕಂಡುಬರುತ್ತಿಲ್ಲ. ಪರಿಶೀಲನಾ ಕಾರ್ಯ ಸಂಪೂರ್ಣವಾದ ನಂತರ ದಾಖಲಾತಿಗಳನ್ನು ನಿಯಮಾನುಸಾರ ವಶಕ್ಕೆ ಪಡೆಯಲಾಗುತ್ತದೆ. ಅಗತ್ಯವಿದ್ದರೆ ಆರೋಪಿಗಳನ್ನು ವಶಕ್ಕೆ ಪಡೆಯುವ ಬಗ್ಗೆ ಮೇಲಧಿಕಾರಿಗಳ ಆದೇಶದನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಏನಿದು ಪ್ರಕರಣ?: ದರಖಾಸ್ತು ಯೋಜನೆಯ ಸಾಗುವಳಿ, ನಕ್ಷೆ ಹಾಗೂ ವಿಸ್ತಿರ್ಣದ ಜತೆಗೆ ಫಲಾನುಭವಿಯ ಹೆಸರುಗಳ ದಾಖಲಾತಿಗಳನ್ನು ಮೇಲ್ಕಂಡ ನಾಲ್ಕು ಜನರು ಸೇರಿ ಮೈಸೂರಿನ ವಸತಿ ಗೃಹದಲ್ಲಿ ಅಕ್ರಮವಾಗಿ ತಿದ್ದುಪಡಿ ಮಾಡುವ ಮೂಲಕ ಕರ್ತವ್ಯ ಲೋಪ, ಅಧಿಕಾರ ದುರ್ಬಳಕೆ ಮಾಡಿಕೊಂಡಿರುತ್ತಾರೆ. ದೇವಲಾಪುರ ಹೋಬಳಿಯ ಎಚ್.ಎನ್. ಕಾವಲಿನ ಗೋಮಾಳ ಸೇರಿದಂತೆ ತಾಲೂಕಿನ ನಾನಾ ಭಾಗಗಳಲ್ಲಿನ ದಾಖಲಾತಿಗಳನ್ನು ತಮಗೆ ಬೇಕಾದವರ ಹೆಸರಿಗೆ ತಿದ್ದುಪಡಿ ಮಾಡುವ ಜತೆಗೆ ಮೂಲ ಕಡತಗಳ ಮಧ್ಯದಲ್ಲಿ ನಕಲಿ ಕಡತಗಳನ್ನು ಸೇರಿಸಿ ತಹಸೀಲ್ದಾರ್ ಸೇರಿದಂತೆ ಬಗರ್‌ಹುಕಂ ಸಮಿತಿಯಲ್ಲಿ ಮಂಜೂರು ಆಗುವಂತೆ ನೋಡಿಕೊಂಡು ಕೋಟ್ಯಂತರ ಹಣ ಮಾಡುವ ಉದ್ದೇಶ ಇತ್ತೆಂದು ಹೇಳಲಾಗಿದೆ.